×
Ad

ಅಮೆರಿಕದ ಜಾನ್‌ ಎಫ್. ಕೆನಡಿ ಸ್ಪೇಸ್ ಸೆಂಟರ್‌ನಲ್ಲಿ ಶೀರೂರಿನ 'ಗ್ರೀನ್ ವ್ಯಾಲಿ' ವಿದ್ಯಾರ್ಥಿಗಳು

Update: 2016-04-09 15:11 IST

  ಅಮೆರಿಕದ ಒರ್ಲ್ಯಾಂಡೋ ಪೋರ್ಟ್ ಕನವರೆಲ್‌ನ ಜಾನ್ ಎಫ್. ಕೆನಡಿ ಸ್ಪೇಸ್ ಸೆಂಟರ್‌ಗೆ ತೆರಳುವ    ಸುವರ್ಣಾವಕಾಶವೊಂದು ಉಡುಪಿ ಜಿಲ್ಲೆಯ ಪುಟ್ಟ ಗ್ರಾಮ ಶೀರೂರಿನ ಪ್ರತಿಷ್ಠಿತ ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳಿಗೆ ಲಭ್ಯವಾಗಿದೆ. ಉಡುಪಿ ಶೀರೂರಿನ ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಮತ್ತು ಪಿಯು ಕಾಲೇಜಿನ 11 ಮಂದಿ ವಿದ್ಯಾರ್ಥಿಗಳ ತಂಡ ಜಾನ್ ಎಫ್. ಕೆನಡಿ ಬಾಹ್ಯಾಕಾಶ ಸೆಂಟರ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಬಾಹ್ಯಾಕಾಶ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ವಿದ್ಯಾರ್ಥಿಗಳಾದ ಆರನೆ ಎ ವಿಭಾಗದ ಫಾತಿಮಾ ಹೈಫಾ, ಎಂಟನೆ ತರಗತಿ ಬಿ ವಿಭಾಗದ ಸಾರಾ ರುಕ್ನದ್ದೀನ್, 9ನೆ ಬಿಯ ಶಾಂತಿಕಾ, ಫೌಝಿಯಾ ಬೇಗಂ, 8ನೆ ತರಗತಿ ಬಿ ವಿಭಾಗದ ಅದಮ್ ರುಕ್ನದ್ದೀನ್, 9ನೆ ಬಿಯ ಗ್ಲೆನ್ ಫುರ್ಟಾಡೊ, 9ನೆ ಎಯ ಮುಹಮ್ಮದ್ ಝುಬೇರ್, 8ನೆ ಬಿಯ ಶಾಹಿದ್ ಬದಿಯಡ್ಕ, 9ನೆ ಎಯ ಅದಿಲ್ ಸಿನ್ಹಾನ್ ಬೆರಿ, 6ನೆ ಎ ತರಗತಿಯ ಮುಹಮ್ಮದ್ ರುವೈಫ್ ಅಸ್ಕೆರಿ, ಮುಹಮ್ಮದ್ ಬಾಷಾ ಹಾಗೂ ಕಾಲೇಜನ ಮುಖ್ಯ ಸಂಯೋಜಕಿ ವಿಲ್ಹೆಮಿನಾ ಮ್ಯಾಥ್ಯೂ ಅಂತಾರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

‘‘ಶಿಬಿರದಲ್ಲಿ ನಮ್ಮ ವಿದ್ಯಾರ್ಥಿಗಳು ಹಲವಾರು ಚಟುವಟಿಕೆಗಳು ಮತ್ತು ಸಂವಾದ ಸವಾಲುಗಳಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭ ವಿದ್ಯಾರ್ಥಿಗಳು ಬಾಹ್ಯಾಕಾಶದ ಕುರಿತಂತೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಅವಕಾಶವನ್ನು ಪಡೆಯಲಿದ್ದಾರೆ. ಜೊತೆಗೆ ಸಾಕಷ್ಟು ಮನರಂಜನೆ, ಗಗನಯಾತ್ರಿಗಳ ಜತೆ ಸ್ನೇಹ ಬೆಳೆಸುವ ಮತ್ತು ಅವರ ಅನುಭವಗಳನ್ನು ಪಡೆಯಲಿದ್ದಾರೆ. ವಿದ್ಯಾರ್ಥಿಗಳು ಈ ಸಂದರ್ಭ ರಾಕೆಟ್ ಗಾರ್ಡನ್, ಬಾಹ್ಯಾಕಾಶ ನೌಕೆಯ ಉಡಾವಣೆಯ ಅನುಭವಕ್ಕಾಗಿ ಸ್ಪೇಸ್ ಮೂಸಿಯಂಗೆ ಭೇಟಿ ನೀಡುವ ಅವಕಾಶದ ಜತೆಗೆ ಗಗನಯಾತ್ರಿಗಳ ಜತೆ ಔತಟಕೂಟದ ಅವಕಾಶವನ್ನೂ ಪಡೆಯಲಿದ್ದಾರೆ. ಇವೆಲ್ಲದರ ಜತೆಗೆ ಬಾಹ್ಯಾಕಾಶ ವಿಮಾನ ಹಾಗೂ ಕ್ಷಿಪಣಿಗಳ ಕುರಿತಂತೆಯೂ ಅರಿತುಕೊಳ್ಳಲಿದ್ದಾರೆ’’ ಎಂದು ಕಾಲೇಜಿನ ಪ್ರಾಂಶುಪಾಲ ಜಾನ್ ಮ್ಯಾಥ್ಯೂ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಶಿಬಿರವೊಂದರಲ್ಲಿ ಭಾಗವಹಿಸುವ ಅವಕಾಶವು ಶೀರೂರಿನ ಗ್ರೀನ್ ವ್ಯಾಲಿ ಪಿಯು ಕಾಲೇಜಿನಿಂದ ವಿದ್ಯಾರ್ಥಿಗಳಿಗೆ ದೊರಕಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಬಾಹ್ಯಾಕಾಶ ಶಿಬಿರದಲ್ಲಿ ಭಾಗವಹಿಸುತ್ತಿರುವ ತಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಮುಖ್ಯ ಸಂಯೋಜಕರಿಗೆ ಸಂಸ್ಥೆ ಅಧ್ಯಕ್ಷ ಸಯ್ಯದ್ ಅಬ್ದುಲ್ ಖಾದರ್ ಬಾಶು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News