×
Ad

ಎ.14 ಮತ್ತು 15ರಂದು ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ರಜತಮಹೋತ್ಸವ

Update: 2016-04-09 16:53 IST

ಕಾರ್ಕಳ : ಕಾರ್ಕಳ ಗಾಂಧಿಮೈದಾನದ ಬಳಿಯಲ್ಲಿರುವ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯ ರಜತಮಹೋತ್ಸವ ಕಾರ್ಯಕ್ರಮವು ಎ.14 ಮತ್ತು ಎ.15ರಂದು ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಅವೆಲಿನ್ ಆರ್.ಲೂಯಿಸ್ ಹೇಳಿದ್ದಾರೆ.
ಅವರು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1989-90ರಲ್ಲಿ ಶಾಲೆ ಎಲ್.ಕೆ.ಜಿ.ಯಿಂದ ಪ್ರಾರಂಭಗೊಂಡಿತು. ದಿ.ವಂದನೀಯ ರೆ.ಫಾ.ಎಫ್.ಪಿ.ಎಸ್ ಮೋನಿಸ್ ನೇತೃತ್ವದಲ್ಲಿ ಅವೆಲಿನ್ ಲೂಯಿಸ್, ಡಾ.ಪೀಟರ್ ಫೆರ್ನಾಂಡೀಸ್, ವಾಲ್ಟರ್ ಡಿಸೋಜ ಹಾಗೂ ಲೂಸಿ ಡಿಲೀಮಾ ಮುಂತಾದವರನ್ನೊಳಗೊಂಡ ಕ್ರೈಸ್ಟ್ ಕಿಂಗ್ ಎಜುಕೇಶನ್ ಟ್ರಸ್ಟ್‌ನ ಅಡಿಯಲ್ಲಿ ಈ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಕ್ರೈಸ್ಟ್ ಕಿಂಗ್ ಪ್ಲೇ ಸ್ಕೂಲ್, ಕ್ರೈಸ್ಟ್ ಕಿಂಗ್ ಕಿಂಡರ್ ಗಾರ್ಟನ್ ಸ್ಕೂಲ್, ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆ, ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆ.
ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜು, ಕ್ರೈಸ್ಟ್ ಕಿಂಗ್ ಟೆಕ್ನಿಕಲ್ ಎಜುಕೇಶನ್ ಇನ್ ಕಂಪ್ಯೂಟರ್ ಕಾರ್ಯಾಚರಿಸುತ್ತಿವೆ ಎಂದರು.

ಸುಮಾರು 2000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೂ ಸಾಮಾಜಿಕ ನ್ಯಾಯದಡಿಯಲ್ಲಿ ಸುಲಭವಾಗಿ ಗುಣಮಟ್ಟದ ಆಂಗ್ಲಮಾಧ್ಯಮ ಶಿಕ್ಷಣ ದೊರಕಬೇಕು ಎನ್ನುವುದು ನಮ್ಮ ಉದ್ದೇಶವಾಗಿದ್ದು, ಈ ಮೂಲಕ ಸಾಮಾಜಿಕ ಬೆಳವಣಿಗೆಯಾಗಬೇಕು. ಅಲ್ಲದೆ ಜಾತಿ, ಮತ, ಧರ್ಮಗಳನ್ನು ಮೀರಿ ಶಿಕ್ಷಣ ದೇಗುಲದಲ್ಲಿ ಎಲ್ಲರಿಗೂ ಶಿಕ್ಷಣ ದೊರಕಬೇಕಾಗಿದೆ ಎಂದರು. 25 ವರ್ಷಗಳಲ್ಲಿ ನಾವೂ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿದ್ದು, ಪ್ರಸಕ್ತ ಸಾಲಿನಲ್ಲಿ ರಜತ ಮಹೋತ್ಸವ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸುಸಜ್ಜಿತ ಕಟ್ಟಡವನ್ನು ಪ್ರಾಥಮಿಕ ವಿಭಾಗಕ್ಕೆ ನಿರ್ಮಾನ ಮಾಡಲಾಗಿದೆ. ಪ್ಲೇ ಸ್ಟೇಷನ್, ಚಿಲ್ಡ್ರನ್ಸ್ ಪಾರ್ಕ್, ಮುಖ್ಯ ಸ್ವಾಗತ ಗೋಪುರ, ಕ್ಯಾಂಟೀನ್, ಪುಸ್ತಕ ಮಳಿಗೆ, ಫ್ರೆಶ್ ಜ್ಯೂಸ್ ಸೆಂಟರ್ ಮುಂತಾದ ನೂತನ ಕಾಮಗಾರಿಗಳ ಉದ್ಘಾಟನೆ ನಡೆಯಲಿದೆ ಎಂದರು.

ಪ್ರಶಸ್ತಿ : ನಮ್ಮ ಸಂಸ್ಥೆಯ ಶೈಕ್ಷಣಿಕ ಮತ್ತು ಟ್ರಸ್ಟ್‌ನ ಆಡಳಿತ ವೈಶಿಷ್ಟ್ಯವನ್ನು ಗುರುತಿಸಿ 2015ರಲ್ಲಿ ಐಎಸ್‌ಓ 9001-2008 ಪ್ರಮಾಣ ಪತ್ರ ಹಾಗೂ 2016ರಲ್ಲಿ ದೆಹಲಿಯಲ್ಲಿ ನಡೆದ ಏಷಿಯಾ ಶಿಕ್ಷಣ ಸಮ್ಮೇಳನದಲ್ಲಿ ಕರ್ನಾಟಕದ ಉತ್ತಮ ಸಾರ್ವಜನಿಕ ಶಿಕ್ಷಣ ಸಂಸ್ಥೆ ಎಂಬ ಪ್ರಶಸ್ತಿ ಲಭಿಸಿದೆ. ಸುದ್ದಿಗೋಷ್ಠಿಯಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನಾರಾಯಣ ಶೇಡಿಕಜೆ, ಟ್ರಸ್ಟ್‌ನ ಸದಸ್ಯ ವಾಲ್ಟರ್ ಡಿಸೋಜಾ ಉಪಸ್ಥಿತರಿದ್ದರು.
ಕಾರ್ಯಕ್ರಮಗಳು :
ಎ.14ರಂದು ಬೆಳಿಗ್ಗೆ 9 ಗಂಟೆಗೆ ಪುರಸಭೆ ಅಧ್ಯಕ್ಷೆ ಅನಿತಾ ಅಂಚನ್ ಧ್ವಜಾರೋಹಣ ನೆರವೇರಿಸಿದರು. ಎ.15ರಂದು ಸಂಜೆ 5 ಗಂಟೆಗೆ ಉಡುಪಿ ಪ್ರಾಂತ್ಯದ ಬಿಷಪ್ ಅ.ವಂ.ಫಾ.ಡಾ.ಜೆರಾಲ್ಡ್ ಲೋಬೋ ಆಶೀರ್ವಚನ ನೀಡಲಿರುವರು. ಎರಡೂ ದಿನ ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಂತ್ರಿಗಳು, ಶಾಸಕರು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಎ.14ರಂದು ಸಂಜೆ 6 ಗಂಟೆಗೆ ಕುದ್ರೋಳಿ ಗಣೇಶ್ ಇವರಿಂದ ಇಂದ್ರಜಾಲ ಮಾಯಾಲೋಕ ಮತ್ತು ಭಾರ್ಗವಿ ಆರ್ಟ್ಸ್ ಮತ್ತು ಡ್ಯಾನ್ಸ್ ಅಕಾಡೆಮಿ ಉಡುಪಿ ಇವರಿಂದ ನೃತ್ಯ ವೈಭವ, ಎ.15ರಂದು ಸಂಜೆ 6 ಗಂಟೆಗೆ ಗುರುಕಿರಣ್ ಇವರಿಂದ ಸಂಗೀತ ರಸಮಂಜರಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News