ಕೊಣಾಜೆ: ಶಿಕ್ಷಣವು ಭಾವನಾತ್ಮಕ ಮತ್ತು ಮಾನವೀಯ ಮೌಲ್ಯ ರೂಪಿಸಬೇಕು: ಯು.ಟಿ.ಖಾದರ್
ಕೊಣಾಜೆ: ನಾವು ಪಡೆಯುವ ಶಿಕ್ಷಣವು ನಮ್ಮಲ್ಲಿ ಭಾವನಾತ್ಮಕ ಮತ್ತು ಮಾನವೀಯ ಮೌಲ್ಯಗಳನ್ನು ರೂಪಿಸಬೇಕು. ಇದರಿಂದ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು. ಕೊಣಾಜೆ ಜಿಲ್ಲಾ ಪಂಚಾಯಿತಿ ಸರ್ಕಾರಿ ಶಾಲೆಯ ಅಭಿವೃದ್ಧಿ ಕಾಮಗಾರಿಯನ್ನು ಸುಮಾರು 13 ಲಕ್ಷ ರೂ ವೆಚ್ಚೆದಲ್ಲಿ ಲಯನ್ಸ್ ಜಿಲ್ಲೆ 317.ಡಿಯ ಲಯನೆಸ್ ವಿಭಾಗದ ವತಿಯಿಂದ ನಡೆಸಲಾಗಿದ್ದು, ನವೀಕರಣಗೊಂಡ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಅವರು ನೆರವೇರಿಸಿ ಮಾತನಾಡಿದರು.
ನಂಬಿಕೆ ಮತ್ತು ವಿಶ್ವಾಸದಡಿಯಲ್ಲಿ ಭಾರತವು ನೆಲೆನಿಂತಿದೆ. ನಾವಾಡುವು ಮಾತು ದೇಶದ ಸೌಹರ್ದತೆಗೆ ಪೂರಕವಾಗಿರಬೇಕು ಹೊರತು ಮಾರಕವಾಗಬಾರದು ಎಂದು ಅವರು ಹೇಳಿದರು. ಅಲ್ಲದೆ ಶಿಕ್ಷಣ ಸಂಸ್ಥೆಗಳ ಅಭಿವೃದ್ದಿ ಕೆಲಸಗಳಲ್ಲಿ ಸರಕಾರದ ಜೊತೆ ಲಯನೆಸ್ ನಂತಹ ಸಂಘ ಸಂಸ್ಥೆಗಳು ಕೂಡಾ ಕೈ ಜೋಡಿಸಿದರೆ ಶಿಕ್ಷಣದ ಜೊತೆಗೆ ದೇಶದ ಅಭಿವೃದ್ದಿ ಕೂಡಾ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್, ಸರಕಾರಿ ಶಾಲೆಗಳ ಬಗ್ಗೆ ಇರುವ ನಿರ್ಲಕ್ಷ ನಮ್ಮಿಂದ ದೂರವಾಗಬೇಕು. ಅಬ್ದುಲ್ ಕಲಾಂ, ವಿಶ್ವೇಶ್ವರಯ್ಯ ಮುಂತಾದ ಮಹಾನ್ ಸಾಧಕರೂ ಸರ್ಕಾರಿ ಶಾಲೆಗಳಲ್ಲಿಯೇ ಕಲಿತವರು. ಆದ್ದರಿಂದ ಪೋಷಕರು ಸರ್ಕಾರಿ ಶಾಲೆಗಳ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು. ಜಿಲ್ಲಾ ಲಯನೆಸ್‌ನ ಅಧ್ಯಕ್ಷೆ ಅರುಣಾ ಸೋಮಶೇಖರ್ ಮಾತನಾಡಿ, ಮನುಷ್ಯನಲ್ಲಿ ಸಂಪನ್ಮೂಲವನ್ನು ತುಂಬುವುದು ಶಿಕ್ಷಣ ಮಾತ್ರ. ಲಯನೆಸ್ ಶೈಕ್ಷಣಿಕವಾಗಿ ಸೇವೆಗೈಯುವ ನಿಟ್ಟಿನಲ್ಲಿ ಕೊಣಾಜೆ ಪದವಿನ ಸರಕಾರಿ ಶಾಲೆಯ ಸಮಸ್ಯೆಯನ್ನು ಅರಿತುಕೊಂಡು ಸಂಘ ಸಂಸ್ಥೆಗಳ ಊರಿನವರ ಸಹಕಾರದೊಂದಿಗೆ ಶಾಲೆ ಅಭಿವೃದ್ದಿ ಕಾಮಗಾರಿಯನ್ನು ನಡೆಸಲು ಮುಂದಾಯಿತು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಭಿವೃದ್ಧಿ ಕಾಮಗಾರಿಯ ಮುಂದಾಳುತ್ವವನ್ನು ವಹಿಸಿದಂತಹ ಪ್ರಸಾದ್ ರೈ ಕಲ್ಲಿಮಾರ್ ಹಾಗೂ ವಿಜಯಲಕ್ಷ್ಮೀ ಪಿ.ರೈ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೌಕತ್ ಆಲಿ, ಜಿಲ್ಲಾ ಪಂಚಾಯಿತಿ ಸದಸ್ಯೆ ರಶೀದಾ ಭಾನು, ತಾ.ಪಂ.ಸದಸ್ಯೆ ಪದ್ಮಾವತಿ ಶೇಖರ್, ಲಯನೆಸ್‌ನ ಜಯಂತಿ ವಿ.ರಾವ್, ನೀತಾ ಶ್ಯಾನುಬಾಗ್, ಶಾಲಾ ಮುಖ್ಯೋಪಾಧ್ಯಾಯಿನಿ ಪ್ರೆಸ್ಸಿ ಕುವೆಲ್ಲೋ ಮುಂತಾದವರು ಉಪಸ್ಥಿತರಿದ್ದರು. ವಿನುತಾ ಬಿ.ಕಾಜವ ಸ್ವಾಗತಿಸಿ, ಸಬಿತಾ ಶೆಟ್ಟಿ ವಂದಿಸಿದರು. ವಿಜಯಲಕ್ಷ್ಮೀ ಪಿ.ರೈ ಅವರು ನಿರೂಪಿಸಿದರು.