×
Ad

ಮ್ಯಾನ್ಮಾರ್: 113 ಕೈದಿಗಳಿಗೆ ಕ್ಷಮಾದಾನ, 2 ಮುಸ್ಲಿಮರಿಗೆ ಕ್ಷಮೆಯಿಲ್ಲ

Update: 2016-04-09 17:26 IST

ಯಾಂಗನ್ (ಮ್ಯಾನ್ಮಾರ್), ಎ. 9: ಮ್ಯಾನ್ಮಾರ್‌ನ ಯಥಾರ್ಥ ನಾಯಕಿ ಆಂಗ್ ಸಾನ್ ಸೂ ಕಿ, 113 ರಾಜಕೀಯ ಕೈದಿಗಳಿಗೆ ಕ್ಷಮಾದಾನ ನೀಡಿ ಬಿಡುಗಡೆಗೆ ಆದೇಶ ನೀಡಿದ್ದಾರೆ. ಆದರೆ, ಅದೇ ವೇಳೆ, ಶಾಂತಿಯುತ ಚಳವಳಿ ನಡೆಸಿರುವುದಕ್ಕಾಗಿ ಜೈಲು ಸೇರಿದ್ದ ಇಬ್ಬರು ಮುಸ್ಲಿಂ ಕೈದಿಗಳನ್ನು ಜೈಲಿನಲ್ಲೇ ಬಿಟ್ಟಿದ್ದಾರೆ.

ಮ್ಯಾನ್ಮಾರ್‌ನ ಯಥಾರ್ಥ ನಾಯಕಿಯಾಗಿ ಅಧಿಕಾರಕ್ಕೆ ಬಂದ ಬಳಿಕ ಮಾಡಿದ ಮೊದಲ ಅಧಿಕೃತ ಚಟುವಟಿಕೆಯಲ್ಲಿ, ಸೂ ಕಿ ಕೈದಿಗಳಿಗೆ ಕ್ಷಮಾದಾನ ನೀಡಿ ಆದೇಶ ಹೊರಡಿಸಿದ್ದಾರೆ ಎಂದು ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ನ್ಯೂ ಲೈಟ್ ಆಫ್ ಮ್ಯಾನ್ಮಾರ್’ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಶನಿವಾರ ವರದಿ ಮಾಡಿದೆ.

ದೇಶದ ಸಾಂಪ್ರದಾಯಿಕ ಹೊಸ ವರ್ಷಾಚರಣೆಗೆ ಪೂರ್ವಭಾವಿಯಾಗಿ ಕೈದಿಗಳಿಗೆ ಸಾರ್ವತ್ರಿಕ ಕ್ಷಮಾದಾನ ನೀಡುವ ಸಂಪ್ರದಾಯದ ಭಾಗವಾಗಿ ಶುಕ್ರವಾರ ದೇಶಾದ್ಯಂತ ಕೈದಿಗಳನ್ನು ಬಿಡುಗಡೆ ಮಾಡಲಾಯಿತು. ಸಾಮಾನ್ಯವಾಗಿ ಹೊಸ ವರ್ಷ ಸಂದರ್ಭದಲ್ಲಿ ಕೈದಿಗಳಿಗೆ ಕ್ಷಮಾದಾನ ನೀಡಲಾಗುತ್ತದೆ.

ಆದಾಗ್ಯೂ, ಇಬ್ಬರು ಮುಸ್ಲಿಂ ಶಾಂತಿ ಕಾರ್ಯಕರ್ತರು ಎರಡು ವರ್ಷಗಳ ಕಠಿಣ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿದ್ದರೂ ಅವರನ್ನು ಉಪೇಕ್ಷಿಸಲಾಗಿದೆ. ಸರಕಾರ ವಿರೋಧಿ ಬುಡಕಟ್ಟು ಗುಂಪುಗಳೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿತ್ತು.

ಶಾಂತಿ ಕಾರ್ಯಕರ್ತರಾದ ಝಾ ಝಾ ಲಾಟ್ ಮತ್ತು ಪ್ವಿಂಟ್ ಫ್ಯೂ ಲಾಟ್, ಮ್ಯಾನ್ಮಾರ್‌ನ ಉತ್ತರದಲ್ಲಿರುವ ಬಂಡುಕೋರರ ಗುಂಪು ‘ಕಚಿನ್ ಇಂಡಿಪೆಂಡೆನ್ಸ್ ಆರ್ಮಿ’ಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿತ್ತು. ಮಾಂಡಲೇಯ ನ್ಯಾಯಾಲಯವೊಂದು ಅವರಿಗೆ ಜೈಲು ಶಿಕ್ಷೆ ವಿಧಿಸಿತು.

ವಲಸೆ ಕಾನೂನು ಉಲ್ಲಂಘಿಸಿದ್ದಾರೆ ಎಂಬ ಆರೋಪದಲ್ಲಿ ಈ ಇಬ್ಬರಿಗೂ ಫೆಬ್ರವರಿಯಲ್ಲಿ 2 ವರ್ಷಗಳ ಜೈಲು ಶಿಕ್ಷೆವಿಧಿಸಲಾಗಿತ್ತು.

ಕೈದಿಗಳ ಬಿಡುಗಡೆಯ ಸಂಭ್ರಮದಲ್ಲಿ ಇಬ್ಬರು ಮುಸ್ಲಿಂ ಕೈದಿಗಳ ಪ್ರಕರಣವನ್ನು ಉಪೇಕ್ಷಿಸಲಾಗಿದೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News