×
Ad

ಮಂಗಳೂರು : 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಜಯಗಳಿಸುತ್ತದೆ - ಬಿ.ಜನಾರ್ದನ ಪೂಜಾರಿ

Update: 2016-04-09 19:01 IST

  ಮಂಗಳೂರು,ಎ.9: ಭ್ರಷ್ಠಾಚಾರದ ಮೂಲಕ ಜೈಲಿಗೆ ಹೋದ ಮುಖ್ಯಮಂತ್ರಿ ಎಂದು ಚರಿತ್ರೆಯಿರುವ ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಭೀಮಬಲ ಬಂದಾಂತಾಗಿದ್ದು 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಜಯಗಳಿಸುತ್ತದೆ ಎಂಬ ಸ್ಪಷ್ಟ ಚಿತ್ರಣ ಕಾಣಿಸುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದರು.

         ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಯಡ್ಯೂರಪ್ಪನವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಷಾ ರಾತ್ರಿ ಕಂಡ ಹೊಂಡಕ್ಕೆ ಹಗಲು ಬಿದ್ದಂತಾಗಿದೆ. ಯಡ್ಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯಾದಾಗಿದ್ದು ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಷಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

   ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ನಂತರ ಯಡ್ಯೂರಪ್ಪನವರು ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕೆ ಮುಂಚೆಯೆ ಭಾರತದಲ್ಲಿ ಕಾಂಗ್ರೆಸ್ ಮುಕ್ತ ಮಾಡಲಾಗುವುದು ಎಂದು ಹೇಳಿದರು. ಮೋದಿ ಅವರಿಗೆ ಎರಡು ವರ್ಷದಲ್ಲಿ ಕಾಂಗ್ರೆ ಸ್ ಮುಕ್ತ ಮಾಡಲು ಸಾಧ್ಯವಾಗಿಲ್ಲ. ಯಡ್ಯೂರಪ್ಪನವರಿಗೆ ಅವರ ಜನ್ಮದಲ್ಲಿಯೆ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಬಿಜೆಪಿಯನ್ನು ಮುಂದೆ ಅಧಿಕಾರಕ್ಕೆ ತರುವ ಗುರಿ ಹೊಂದಿರುವುದಾಗಿ ತಿಳಿಸಿರುವ ಯಡ್ಯೂರಪ್ಪನವರು ಮೊದಲಿಗೆ ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಲಿ ಎಂದು ಹೇಳಿದರು.

ಯಡ್ಯೂರಪ್ಪನವರ ಪ್ರೇರಣಾ ಪ್ರಕರಣ ಇನ್ನೂ ಸಿಬಿಐನಲ್ಲಿದೆ. ಡಿನೋಟಿಪಿಕೆಶನ್ ಮಾಡಿ ಸಿಕ್ಕಿಬಿದ್ದಿದ್ದಾರೆ. ಇವರ ಭ್ರಷ್ಟಾಚಾರ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಅಸ್ತ್ರ ಸಿಕ್ಕಂತಾಗಿದೆ ಎಂದು ಹೇಳಿದರು.

 ಯಡ್ಯೂರಪ್ಪನವರು ತಮ್ಮ ಮಾತಿಗೆ ಕಡಿವಾಣ ಹಾಕದಿದ್ದರೆ ಅವರ ಚರಿತ್ರೆಯನ್ನು ಜಾಲಾಡಬೇಕಾಗುತ್ತದೆ. ವೈಯಕ್ತಿಕ ಜೀವನದ ಬಗ್ಗೆಯೂ ಬಯಲು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

 ಮುಖ್ಯಮಂತ್ರಿಗಳು ಬರಗಾಲ ಪ್ರದೇಶಕ್ಕೆ ವೈಯಕ್ತಿಕವಾಗಿ ಭೇಟಿ ನೀಡಬೇಕು. ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಗೆ ಸೂಚನೆ ನೀಡುವುದನ್ನು ನಿಲ್ಲಿಸಿ

 ವೈಯ್ಯಕ್ತಿಕವಾಗಿ ಭೇಟಿ ನೀಡಿದರೆ ಅಲ್ಲಿನ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

  ಬಿಜೆಪಿ ಯು ವಿಶ್ವವಿದ್ಯಾನಿಲಯಗಳಲ್ಲಿ ಎಬಿವಿಪಿ ಮೂಲಕ ಗುಂಪುಗಾರಿಕೆ ಮಾಡಿಸಿ ವಿದ್ಯಾರ್ಥಿಗಳನ್ನು ಕ್ರಿಮಿನಲ್ ಗಳನ್ನಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

   ಎಸಿಬಿ ರಚನೆ ಬೇಡ ಎಂದು ನಾನು ಹೇಳಿದರೂ ಅದನ್ನು ಕೇಳಲಿಲ್ಲ. ಇದೀಗ ಈ ಬಗ್ಗೆ ಹೈಕೋರ್ಟು ತಡೆಯಾಜ್ಞೆ ನೀಡಿದೆ. ಇನ್ನಾದರೂ ಎಸಿಬಿಯನ್ನು ಹಿಂದಕ್ಕೆ ಪಡೆಯಿರಿ ಎಂದು ಆಗ್ರಹಿಸುತ್ತಿದ್ದೇನೆ. ಮುಖ್ಯಮಂತ್ರಿಗಳ ಮೇಲೆ ಭ್ರಷ್ಟಾಚಾರ ಆರೋಪವಿಲ್ಲ. ಆದರೆ ಎಸಿಬಿ ಇದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಯಡ್ಯೂರಪ್ಪನವರ ಭ್ರಷ್ಠಾಚಾರದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದರು.

          ಪತ್ರಿಕಾಗೋಷ್ಟಿಯಲ್ಲಿ ಶಾಸಕ ಜೆ.ಆರ್.ಲೋಬೋ, ಕಾಂಗ್ರೆಸ್ ಮುಖಂಡರುಗಳಾದ ಕಳ್ಳಿಗೆ ತಾರನಾಥ ಶೆಟ್ಟಿ, ಉಮೇಶ್ಚಂದ್ರ, ಲ್ಯಾನ್ಸಿ ಲಾಟ್ ಪಿಂಟೋ, ಟಿ.ಕೆ .ಸುಧೀರ್, ಅಪ್ಪಿ, ಬಾಲಕೃಷ್ಣ ಶೆಟ್ಟಿ, ಅರುಣ್ ಕೊಯ್ಲಿ, ರಾಧಕೃಷ್ಣ, ನಾಗವೇಣಿ, ದೀಪಕ್ ಪೂಜಾರಿ, ವಿಶ್ವಾಸ್‌ದಾಸ್, ರಮಾನಂದ ಪೂಜಾರಿ, ಮೊಹಮ್ಮದ್ ನವಾಝ್, ಕಮಾಲಾಕ್ಷ ಸಾಲ್ಯಾನ್, ಕರುಣಾಕರ್ ಶೆಟ್ಟಿ, ನಝೀರ್ ಬಜಾಲ್, ನೀರಜ್ ಪಾಲ್, ಮನಿಶ್ ಬೋಳಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News