ಬಾಳಿಗಾ, ಹರೀಶ್ ಕೊಲೆಯಲ್ಲಿ ಬಿಜೆಪಿ ಮುಖಂಡರು ಭಾಗಿ: ಮಿಥುನ್ ರೈ
ಮಂಗಳೂರು, ಎ.9: ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಮತ್ತು ಬಂಟ್ವಾಳದ ಹರೀಶ್ ಪೂಜಾರಿ ಕೊಲೆ ಪ್ರಕರಣದಲ್ಲಿ ಬಿಜೆಪಿ ಮುಖಂಡರು ನೇರವಾಗಿ ಭಾಗಿಯಾಗಿದ್ದಾರೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಆರೋಪಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನಾಯಕ್ ಬಾಳಿಗ ಹತ್ಯೆ ಬಳಿಕ ನಮೋ ಬ್ರಿಗೇಡ್ ಮುಖಂಡ ನರೇಶ್ ಶೆಣೈ ತಲೆಮರೆಸಿಕೊಂಡಿದ್ದು, ಘಟನೆಯಲ್ಲಿ ಅವರ ನೇರ ಪಾತ್ರವಿದೆ. ಆದರೆ ಈ ಬಗ್ಗೆ ಬಿಜೆಪಿ ಅಧ್ಯಕ್ಷರು, ಸಂಸದರು ಯಾಕೆ ವೌನವಾಗಿದ್ದಾರೆ ಎಂದು ಪ್ರಶ್ನಿಸಿದರು. ವಿನಾಯಕ ಬಾಳಿಗ ಹತ್ಯೆಗೆ ಒಂದು ವೇಳೆ ಅಲ್ಪಸಂಖ್ಯಾತರು ಕಾರಣರಾಗಿದ್ದರೆ ಸಂಘಪರಿವಾರ ಜಿಲ್ಲೆಯಲ್ಲಿ ಕೋಮುಗಲಭೆ ಮಾಡಿ ಅಶಾಂತಿ ಸೃಷ್ಟಿಸುತ್ತಿತ್ತು.
ಹತ್ಯೆ ಸುಫಾರಿ ಕೊಟ್ಟಿರುವ ನರೇಶ್ ಶೆಣೈ ಪರ ಕೆಲವರು ಫೇಸ್‌ಬುಕ್‌ನಲ್ಲಿ ಖಾತೆ ಸೃಷ್ಟಿಸಿ ಆತನ ಬೆಂಬಲಕ್ಕೆ ನಿಂತಿದ್ದಾರೆ. ಆತನಿಗೆ ಬೆಂಬಲವಾಗಿ ಸಂದೇಶಗಳನ್ನು ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಆರೋಪಿಯನ್ನು ಬೆಂಬಲಿಸುವುದನ್ನು ಕೊಲೆ ಪ್ರಕರಣದಲ್ಲಿ ಭಾಗಿ ಎಂದೇ ಎಂದು ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.
ವಿನಾಯಕ ಬಾಳಿಗ ಪ್ರಕರಣವನ್ನು ನಿಧಾನಗತಿಯಲ್ಲಿ ಮಾಡಲು ಗೃಹಸಚಿವರು ಸೂಚಿಸಿದ್ದಾರೆ ಎಂದು ರಾಷ್ಟ್ರೀಯ ವಿಚಾರವಾದಿ ಸಂಘಟನೆಯ ಅಧ್ಯಕ್ಷ ನರೇಂದ್ರ ನಾಯಕ್ ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲ. ಹತ್ಯೆ ನಡೆದ ದಿನವೆ ಗೃಹಸಚಿವರು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮಂಗಳೂರು ಪೊಲೀಸ್ ಕಮೀಷನರ್‌ಗೆ ಸೂಚಿಸಿದ್ದಾರೆ ಎಂದು ಮಿಥುನ್ ರೈ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಸಂತೋಷ್ ಶೆಟ್ಟಿ, ದೀಪಕ್ ಪೂಜಾರಿ, ಚೇತನ್, ಪ್ರಸಾದ್ ಮಲ್ಲಿ, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.