ಮಂಗಳೂರು : ಕೊಂಕಣ ರೈಲ್ವೆ ದ್ವಿಹಳಿ ಯೋಜನೆ ಶೀಘ್ರ ಕಾರ್ಯಗತ: ಸಂಜಯ್ ಗುಪ್ತಾ
ಮಂಗಳೂರು, ಎ. 9: ಕೊಂಕಣ ರೈಲ್ವೆ ದ್ವಿಹಳಿ ಯೋಜನೆ ಶೀಘ್ರದಲ್ಲೇ ಕಾರ್ಯಗತಗೊಳಿಸಲಾಗುವುದು ಎಂದು ಕೊಂಕಣ ರೈಲ್ವೆ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಗುಪ್ತಾ ಹೇಳಿದ್ದಾರೆ.
ಅವರು ನಗರದ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ ಏರ್ಪಡಿಸಲಾದ ಸಂಪಾದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಂಗಳೂರು ಮತ್ತು ಮುಂಬೈ ನಡುವೆ 700 ಕಿ.ಮೀ. ಉದ್ದದ ದ್ವಿ ಹಳಿ ರೈಲು ಮಾರ್ಗ ಯೋಜನೆಯನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಇದರಿಂದ ಕೊಂಕಣ್ ರೈಲ್ವೆ ಹಾಗೂ ದಕ್ಷಿಣ ಭಾರತದ ರೈಲ್ವೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸಂಜಯ್ ಗುಪ್ತಾ ತಿಳಿಸಿದರು.
ಕೊಂಕಣ್ ರೈಲ್ವೆ ವಿಭಾಗದಲ್ಲಿ 20 ಹೊಸ ರೈಲು ನಿಲ್ದಾಣಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಈ ಪೈಕಿ 11 ರೈಲು ನಿಲ್ದಾಣಗಳನ್ನು ಶೀಘ್ರದಲ್ಲೇ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದರು.
ಇದಕ್ಕೂ ಮುನ್ನ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಗಳೂರು ಪ್ರದೇಶದಲ್ಲಿ ವಾಯು ಮಾರ್ಗ, ಜಲ ಮಾರ್ಗ ಮತ್ತು ರೈಲು ಮಾರ್ಗ ಒಂದೇ ಕಡೆ ಇರುವುದರಿಂದ ಸರಕು ಸಾಗಾಟಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕೊಂಕಣ ರೈಲ್ವೆ ನಿಗಮ ಸರಕು ಸಾಗಾಟ ರೈಲು ಸಂಚಾರದ ಅಭಿವೃದ್ಧಿಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ ಎಂದರು.
ಪ್ರತಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಹಿತಿ ನೀಡುವ ಸಾಫ್ಟ್‌ವೇರ್‌ಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕರಿಗೆ ಪ್ರಯಾಣದ ಸಂದರ್ಭದಲ್ಲಿ ಸುರಕ್ಷತೆ ಮತ್ತು ರೈಲು ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈಲ್ವೆ ಇಲಾಖೆಯ ವೆಬ್‌ಸೈಟ್‌ಗಳು ಪ್ರಯಾಣಿಕರಿಗೆ ತಾವು ಪ್ರಯಾಣಿಸುವ ರೈಲಿನ ಬಗ್ಗೆ ಮಾಹಿತಿ ನೀಡುತ್ತವೆ ಎಂದು ಸಂಜಯ್ ಗುಪ್ತಾ ತಿಳಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಅಧ್ಯಕ್ಷ ರಾಮ್‌ಮೋಹನ್ ಪೈ ಮಾರೂರು, ಕಾರ್ಯದರ್ಶಿ ವಟಿಕಾ ಪೈ, ಎಂ.ಗಣೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.