‘ನ್ಯಾಯಾಧೀಶರ ನೇಮಕ ಮುಂದುವರಿಯಬೇಕು’
ಸುಪ್ರೀಂ ಮುಖ್ಯನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹೈದರಾಬಾದ್, ಎ.9: ನ್ಯಾಯಾಧೀಶರ ನೇಮಕಾತಿಯಲ್ಲಿ ಸುಧಾರಣೆ ಆಗುವುದು ಅಗತ್ಯವಾದರೂ, ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಬೇಕು ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅಭಿಪ್ರಾಯಪಟ್ಟರು.
ನ್ಯಾಯಾಧೀಶರ ನೇಮಕಾತಿಯಲ್ಲಿ ವಿಳಂಬ ಮಾಡುವುದು ಜನರ ಮೂಲಭೂತ ಹಕ್ಕನ್ನು ನಿರಾಕರಿಸಿದಂತೆ ಎಂದು ಅವರು ವಿಶ್ಲೇಷಿಸಿದರು. ವಿವಿಧ ಹೈಕೋರ್ಟ್‌ಗಳ 130 ಮಂದಿಯ ಹೆಸರುಗಳನ್ನು ಶಿಪಾರಸು ಮಾಡಲಾಗಿದ್ದು, ಪ್ರಸ್ತಾವನೆ ಈಗ ಕಾನೂನು ಸಚಿವಾಲಯದ ಮುಂದಿದೆ ಎಂದು ಹೇಳಿದರು.
ಕಾನೂನು ಸಚಿವರು ಈ ಪ್ರಕ್ರಿಯೆ ಮುಂದುವರಿಸುತ್ತಾರೆ ಎಂಬ ವಿಶ್ವಾಸವಿದೆ. ಈ ಕ್ಷೇತ್ರದಲ್ಲಿ ಸುಧಾರಣೆ ತರುವ ಅಗತ್ಯವಿದೆಯಾದರೂ, ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆ ಮುಂದುವರಿಯಬೇಕು. ಇದು ನ್ಯಾಯಾಂಗದ ಮೂಲೂತ ಅಗತ್ಯ ಎಂದು ಹೇಳಿದರು.
ಅದು ಜನರ ಮೂಲಭೂತ ಹಕ್ಕು. ಅವರು ನ್ಯಾಯಾಧೀಶರನ್ನು ನೇಮಕ ಮಾಡಿಲ್ಲ ಎಂದಾದರೆ ನಾಗರಿಕರ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ. ಇದು ಸ್ವೀಕಾರಾರ್ಹವಲ್ಲ ಎಂದು 14ನೆ ಅಖಿಲ ಭಾರತ ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.
ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರೂ ಸಮಾರಂಭದಲ್ಲಿ ಹಾಜರಿದ್ದರು.
ಕೊಲಾಜಿಯಂ ವ್ಯವಸ್ಥೆಯಡಿ ಮುಖ್ಯ ನ್ಯಾಯಮೂರ್ತಿಗಳು ಹೆಸರುಗಳನ್ನು ಶಿಪಾರಸು ಮಾಡಿದ್ದು, ಸರಕಾರ ಹಾಗೂ ಕೊಲಾಜಿಯಂ ಅಧಿಕಾರದ ವಿಷಯದಲ್ಲಿ ಭಿನ್ನಾಭಿಪ್ರಾಯ ಇರುವ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆ ವಿಶೇಷ ಮಹತ್ವ ಪಡೆದಿದೆ. ಇದರ ಅನ್ವಯ ಸರಕಾರದ ನಿರ್ಧಾರ ಅಂತಿಮವಾಗಿದ್ದು, ಕೊಲಾಜಿಯಂ ಶಿಪಾರಸು ಮಾಡಿದ ಹೆಸರನ್ನು ರಾಷ್ಟ್ರೀಯ ಹಿತಾಸಕ್ತಿ ಹಿನ್ನೆಲೆಯಲ್ಲಿ ತಿರಸ್ಕರಿಸಲು ಸರಕಾರಕ್ಕೆ ಅಧಿಕಾರವಿದೆ.
ನ್ಯಾಯಾಂಗ ವ್ಯವಸ್ಥೆ ತೀವ್ರ ಒತ್ತಡದಲ್ಲಿದ್ದು, ಇದರ ಅರಿವು ಸರ್ಕಾರಕ್ಕೂ ಇದೆ. 450 ಹೈಕೋರ್ಟ್ ಹುದ್ದೆಗಳು ಖಾಲಿ ಇದ್ದು, ಈ ವರ್ಷ ಮತ್ತೆ 50 ಹುದ್ದೆಗಳು ಖಾಲಿಯಾಗಲಿವೆ ಎಂದು ಸಿಜೆಐ ಹೇಳಿದರು.
ನ್ಯಾಯಾಂಗ ನೇಮಕಾತಿ ವ್ಯವಸ್ಥೆ ಸಂಬಂಧ ತಂದಿದ್ದ ಸಂವಿಧಾನ ತಿದ್ದುಪಡಿ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ನೇಮಕಾತಿ ವಿಳಂಬವಾಗಿದೆ ಎಂದು ಹೇಳಿದರು. ನಾಲ್ಕರಿಂದ ಆರು ವಾರಗಳಲ್ಲಿ 163 ಹೆಸರುಗಳನ್ನು ಅಂತಿಮಪಡಿಸುವುದಾಗಿ ಸರಕಾರ ಸ್ಪಷ್ಟಪಡಿಸಿದೆ. ಈ ಪೈಕಿ 90 ಖಾಯಂ ನ್ಯಾಯಾಧೀಶರ ಹುದ್ದೆಗಳಾಗಿದ್ದು, 40 ಹೊಸ ನೇಮಕಾತಿಗಳು ಸೇರಿವೆ ಎಂದು ವಿವರಿಸಿದರು.