ಮಹಿಳಾ ಅಭ್ಯರ್ಥಿಯ ಸಂಖ್ಯೆಯಲ್ಲಿ ಇಳಿಕೆ
ಗುವಾಹಟಿ, ಎ.9: ಅಸ್ಸಾಂ ವಿಧಾನಸಭಾ ಚುನಾವಣೆಯ ಕಣದಲ್ಲಿರುವ ಮಹಿಳಾ ಅಭ್ಯರ್ಥಿಗಳ ಸಂಖ್ಯೆಯು ತೀರಾ ಕಡಿಮೆಯಾಗಿದ್ದು, ಅವರು ಒಟ್ಟು ಅಭ್ಯರ್ಥಿಗಳ ಪೈಕಿ ಕೇವಲ ಶೇ.8.6ರಷ್ಟಿದ್ದಾರೆ. 2011ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಈ ಸಲ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಟಿಕೆಟ್‌ಗಳನ್ನು ನೀಡಿವೆ.
ಈ ಸಲದ ಚುನಾವಣೆಗೆ ಸ್ಪರ್ಧಿಸಿರುವ ಮಹಿಳೆಯರ ಸಂಖ್ಯೆಯು 2011ರ ಚುನಾವಣೆಗಿಂತ ಕೇವಲ ಆರರಷ್ಟು ಅಧಿಕವಾಗಿದೆ. 2011ರ ವಿಧಾನಸಭಾ ಚುನಾವಣೆಯಲ್ಲಿ 85 ಮಂದಿ ಮಹಿಳೆಯರು ಸ್ಪರ್ಧಿಸಿದ್ದು, 14 ಮಂದಿ ವಿಧಾನಸಭೆ ಪ್ರವೇಶಿಸಲು ಸಫಲರಾಗಿದ್ದರು. ಇವರೆಲ್ಲರೂ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಿದ್ದರು.
ಪ್ರಮುಖ ಪಕ್ಷಗಳಾದ ಕಾಂಗ್ರೆಸ್,ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳಾದ ಎಜಿಪಿ ಹಾಗೂ ಬಿಪಿಎಫ್ ಮತ್ತು ಎಐಯುಡಿಎಫ್ ಕಳೆದ ಚುನಾವಣೆಗಿಂತ ಈ ಸಲ ಮಹಿಳೆಯರಿಗೆ ಕಡಿಮೆ ಸಂಖ್ಯೆಯಲ್ಲಿ ಟಿಕೆಟ್‌ಗಳನ್ನು ನೀಡಿವೆ.
ಅಸ್ಸಾಂನ ಆಡಳಿತಾರೂಢ ಕಾಂಗ್ರೆಸ್ 12 ಹಾಲಿ ಶಾಸಕಿಯರು ಸೇರಿದಂತೆ 16 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅದು 19 ಮಹಿಳೆಯರಿಗೆ ಟಿಕೆಟ್ ನೀಡಿತ್ತು.
ಹಾಲಿ ಕಾಂಗ್ರೆಸ್ ಶಾಸಕಿಯರಾದ ಅಲಗಾಪುರ್ ಕ್ಷೇತ್ರದ ಮಂದಿರಾ ರಾಯ್ ಹಾಗೂ ದುಲಿಯಾಜಾನ್‌ನಿಂದ ಅಮಿಯಾ ಗೊಗೊಯ್‌ಗೆ ಟಿಕೆಟ್‌ಗಳನ್ನು ನಿರಾಕರಿಸಲಾಗಿದೆ. ಹೊಸ ಮುಖಗಳಾದ ಬಬಿತಾ ಶರ್ಮಾ (ಗುವಾಹಟಿ ಪೂರ್ವ), ಡಾ.ಜೂರಿ ಶರ್ಮಾ ಬೊರ್ದೊಲೊಯ್ (ಗುವಾಹಟಿ ಪಶ್ಚಿಮ), ಅಂಕಿತಾ ದತ್ತಾ (ಆಮ್‌ಗುರಿ) ಹಾಗೂ ಪಲ್ಲಬಿ ಸೈಕಿಯಾ ಗೊಗೊಯ್ (ತಿಯೊಕ್) ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ನಾಮಕರಣಗೊಂಡಿದ್ದಾರೆ.
89 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿಯು, ಮಹಿಳೆಯರಿಗೆ ಅತ್ಯಂತ ಕಡಿಮೆ ಟಿಕೆಟ್‌ಗಳನ್ನು ನೀಡಿದೆ. 2011ರ ಚುನಾವಣೆಯಲ್ಲಿ ಅದು 9 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಈ ಸಲ ಕೇವಲ ಆರು ಮಂದಿ ಮಾತ್ರವೇ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯ ಮಿತ್ರಪಕ್ಷವಾದ ಎಜಿಪಿಯಲ್ಲೂ ಕೂಡಾ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಕಳೆದ ಚುನಾವಣೆಯಲ್ಲಿ ಎಂಟು ಮಹಿಳೆಯರಿಗೆ ಟಿಕೆಟ್ ನೀಡಿದ್ದ ಆ ಪಕ್ಷವು, ಈ ಸಲ ಕೇವಲ ಇಬ್ಪರು ಮಹಿಳೆಯರನ್ನು ಮಾತ್ರವೇ ಕಣಕ್ಕಿಳಿಸಿದೆ. ಬಿಜೆಪಿಯ ಇನ್ನೊಂದು ಮಿತ್ರಪಕ್ಷವಾದ ಬಿಪಿಎಫ್,ಕೇವಲ ಇಬ್ಬರು ವನಿತೆಯರಿಗೆ ಮಾತ್ರವೇ ಟಿಕೆಟ್ ನೀಡಿದೆ. 2011ರಲ್ಲಿ ಅದು ಮೂವರು ಮಹಿಳೆಯರನ್ನು ಸ್ಪರ್ಧೆಗಿಳಿಸಿತ್ತು.
ಅಸ್ಸಾಂ ವಿಧಾನಸಭೆಯ ಪ್ರಧಾನ ಪ್ರತಿಪಕ್ಷವಾದ ಎಐಯುಡಿಎಫ್ 74 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಕೇವಲ ಐವರು ಮಹಿಳೆಯರಿಗೆ ಮಾತ್ರವೇ ಟಿಕೆಟ್‌ಗಳನ್ನು ನೀಡಿದೆ.
ಸಿಪಿಎಂ, ಸಿಪಿಐ(ಎಂಎಲ್), ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ ಹಾಗೂ ಯುನೈಟೆಡ್ ಪೀಪಲ್ಸ್ ಪಾರ್ಟಿ ತಲಾ ಓರ್ವ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಎಸ್‌ಯುಸಿಐ ಮೂವರು ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಎಪ್ರಿಲ್ 4ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ, ಮತದಾನ ನಡೆದ 65 ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದರು. ಮೊದಲ ಹಂತದ ಚುನಾವಣೆಯಲ್ಲಿ ಶೇ.82.58 ಮಹಿಳೆಯರು ಹಾಗೂ 81.4 ಶೇ. ಪುರುಷರು ಮತಚಲಾಯಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ 77 ಶೇಕಡ ಪುರುಷರು ಹಾಗೂ ಶೇ.75ರಷ್ಟು ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದುರ.