ಭ್ರಷ್ಟರ ರಕ್ಷಣೆಗಾಗಿ ಎಸಿಬಿ ರಚನೆ: ಎಚ್ಡಿಕೆ ಆರೋಪ

Update: 2016-04-09 18:13 GMT

ಮಂಗಳೂರು, ಎ.9: ರಾಜ್ಯದಲ್ಲಿ ಎಸಿಬಿ ರಚನೆಯಿಂದ ಭ್ರಷ್ಟಾಚಾರ ತಡೆಯುತ್ತೇವೆ ಎಂದು ಜನರನ್ನು ದಾರಿ ತಪ್ಪಿಸುವ ಕೆಲಸದಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ತೊಡಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
  ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಇತರ ರಾಜ್ಯ ಗಳಲ್ಲಿ ಎಸಿಬಿ ರಚನೆಯಾಗಿದೆ ಎಂದು ಹೇಳುತ್ತಿರುವ ರಾಜ್ಯ ಸರಕಾರ ಆ ರಾಜ್ಯಗಳಲ್ಲಿ ಭ್ರಷ್ಟಾಚಾರ ಯಾವ ಪ್ರಮಾಣದಲ್ಲಿ ನಿಯಂತ್ರಣದಲ್ಲಿದೆ ಎಂಬ ಅಂಕಿಅಂಶಗಳ ಪರಿಶೀ ಲನೆ ನಡೆಸಲಿ. ಭ್ರಷ್ಟಾಚಾರಿಗಳನ್ನು ರಕ್ಷಿಸುವ ಉದ್ದೇಶದಿಂದ ಲೋಕಾಯುಕ್ತವನ್ನು ದುರ್ಬಲಗೊಳಿಸಿ ಎಸಿಬಿ ರಚನೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲುಸೇರಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ರಾಜ್ಯಾಧ್ಯಕ್ಷರ ನ್ನಾಗಿ ನೇಮಿಸುವ ಮೂಲಕ ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಅವರು ಟೀಕಿಸಿದರು.
ಮಂಗಳೂರಿನಲ್ಲಿ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಬಗ್ಗೆ ವೌನವಹಿಸಿರುವ ಬಿಜೆಪಿ ರಾಜ್ಯದ ಬೇರೆ ಕಡೆ ಕೊಲೆ ಆರೋಪಿಗಳನ್ನು ಪತ್ತೆ ಮಾಡಿ ಎಂದು ಗೊಂದಲ ಸೃಷ್ಟಿಸುತ್ತಿರು ವುದು ಅದರ ದ್ವಂದ್ವ ನೀತಿಗೆ ನಿದರ್ಶನ ಎಂದು ಕುಮಾರಸ್ವಾಮಿ ಟೀಕಿಸಿದರು.
 ಎ.16ರಂದು ಜೆಡಿಎಸ್ ಸಭೆ: ರಾಜ್ಯದ ಸದ್ಯದ ಪರಿಸ್ಥಿತಿಯ ಅವಲೋಕನ, ಪಕ್ಷ ಸಂಘಟನೆ, ಜನತೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿ ಹೋರಾಟವನ್ನು ಸಂಘಟಿಸುವ ಉದ್ದೇಶದಿಂದ ಎ.16ರಂದು ಮೈಸೂರಿನಲ್ಲಿ ಜೆಡಿಎಸ್ ಶಾಸಕರ ಹಾಗೂ ಪ್ರಮುಖರ ಸಭೆ ಕರೆಯಲಾಗಿದೆ ಎಂದು ಕುಮಾರ ಸ್ವಾಮಿ ತಿಳಿಸಿದರು.
ರಾಜ್ಯಾಧ್ಯಕ್ಷ ಹುದ್ದೆ ತ್ಯಜಿಸಲು ಸಿದ್ಧ:  ರಾಜ್ಯದಲ್ಲಿ ಜೆಡಿಎಸ್ ಅಧ್ಯಕ್ಷ ಹುದ್ದೆಯನ್ನು ವಹಿಸಲು ಪಕ್ಷದಲ್ಲಿ ಯಾರಾದರೂ ಸಿದ್ಧರಿದ್ದರೆ ಹುದ್ದೆ ತ್ಯಜಿಸಲು ತಾನು ಸಿದ್ಧನಾಗಿರು ವುದಾಗಿ ಕುಮಾರಸ್ವಾಮಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಮನಪಾ ಸದಸ್ಯ ಅಝೀಝ್ ಕುದ್ರೋಳಿ, ರಮೀಝಾ ಬಾನು, ಪಕ್ಷದ ಉಡುಪಿ ಜಿಲ್ಲಾಧ್ಯಕ್ಷ ದಕ್ಷತ್ ಶೆಟ್ಟಿ, ಅಕ್ಷಿತ್ ಸುವರ್ಣ, ವಸಂತ ಪೂಜಾರಿ, ಸೈಯದ್ ಶಾಹಿದ್, ಯೋಗೀಶ್ ಶೆಟ್ಟಿ, ಅಶ್ವಿನ್ ಪಿರೇರ, ಸಲೀಂ ಜಾವೇದ್, ಮುನೀರ್ ಮುಕ್ಕಚ್ಚೇರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News