ಸಮಾನ ಮನಸ್ಕ ಶಾಸಕರಿಂದ ಸಿಎಂ ಭೇಟಿ
ಸಂಪುಟ ಪುನಾರಚನೆಯಲ್ಲಿ ಹೊಸಬರಿಗೆ ಆದ್ಯತೆ ನೀಡಲು ಒತ್ತಾಯ
ಬೆಂಗಳೂರು, ಎ.9: ಎಪ್ರಿಲ್ ಮಾಸಾಂತ್ಯಕ್ಕೆ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಯಿರುವುದರಿಂದ ಸಂಪುಟ ಸೇರಲು ಪ್ರಬಲ ಲಾಬಿ ನಡೆಸುತ್ತಿರುವ ಸಮಾನ ಮನಸ್ಕ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ನಗರದಲ್ಲಿರುವ ಮುಖ್ಯಮಂತ್ರಿಯ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ವಿಧಾನಪರಿಷತ್ ಸದಸ್ಯರು ಸೇರಿದಂತೆ 24 ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ಸಂಪುಟದಲ್ಲಿ ಹೊಸಬರಿಗೆ ಆದ್ಯತೆ ನೀಡುವಂತೆ ಒತ್ತಡ ಹೇರಿದರು.
ಇದಕ್ಕೂ ಮುನ್ನ ನಗರದ ಖಾಸಗಿ ಹೊಟೇಲ್‌ನಲ್ಲಿ ಸಭೆ ನಡೆಸಿದ ಸಮಾನ ಮನಸ್ಕ ಶಾಸಕರು, ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರ ಮುಂದೆ ಪ್ರಸ್ತಾಪ ಮಾಡಬೇಕಾದ ವಿಚಾರಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದರು.
ಪ್ರಮುಖವಾಗಿ ಸಚಿವ ಸಂಪುಟದಲ್ಲಿರುವ 20ಕ್ಕೂ ಹೆಚ್ಚು ಅಸಮರ್ಥ ಸಚಿವರನ್ನು ಕೈಬಿಟ್ಟು, 25 ಮಂದಿ ಹೊಸಬರು, ಉತ್ಸಾಹಿಗಳಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು. 2018ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದರೆ ಈಗಿರುವ ತಂಡದಿಂದ ಸಾಧ್ಯವಿಲ್ಲ. ಆದುದರಿಂದ, ಹಿರಿಯರನ್ನು ಪಕ್ಷ ಸಂಘಟನೆಗೆ ಕಳುಹಿಸಿ ಯುವಕರಿಗೆ ಸಂಪುಟದಲ್ಲಿ ಸ್ಥಾನಕಲ್ಪಿಸಬೇಕು ಎಂದು ಶಾಸಕರು ಮುಖ್ಯಮಂತ್ರಿ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿಯನ್ನು ಭೇಟಿಯಾದ ಶಾಸಕರು: ಎಸ್.ಟಿ.ಸೋಮಶೇಖರ್, ಆರ್.ವಿ.ದೇವರಾಜ್, ಕೆ.ಎನ್.ರಾಜಣ್ಣ, ಭೈರತಿ ಬಸವರಾಜು, ವೆಂಕಟರಮಣ ರೆಡ್ಡಿ, ಎಂಟಿಬಿ ನಾಗರಾಜ್, ಪ್ರಮೋದ್ ಮಧ್ವರಾಜ್, ಶಿವಣ್ಣ , ಸುಬ್ಬಾರೆಡ್ಡಿ, ನಾರಾಯಣಸ್ವಾಮಿ, ಡಾ.ರಫೀಕ್ ಅಹ್ಮದ್, ಶಿವಣ್ಣನವರ್, ಗೋಪಾಲ ಪೂಜಾರಿ, ಎಂ.ಕೃಷ್ಣಪ್ಪ, ನರೇಂದ್ರಸ್ವಾಮಿ, ಶಿವಾನಂದಪಾಟೀಲ್, ಈಶ್ವರ ಖಂಡ್ರೆ, ಷಡಕ್ಷರಿ, ಶಾಂತನಗೌಡ, ಮುನಿರತ್ನ, ವಡ್ನಾಳ್ ರಾಜಣ್ಣ, ಯಶವಂತರಾಯಗೌಡ ಪಾಟೀಲ್, ಭೈರತಿ ಸುರೇಶ್ ಹಾಗೂ ಜೆ.ಆರ್.ಲೋಬೊ ಸೇರಿದಂತೆ ಇನ್ನಿತರರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.