ಪತ್ರಕರ್ತ ಹೈಮದ್‌ರ ಮೃತದೇಹ ಹಸ್ತಾಂತರ

Update: 2016-04-09 18:34 GMT

ಮಂಗಳೂರು, ಎ. 9: ಶುಕ್ರವಾರ ಬೆಳಗ್ಗೆ ಚಾರ್ಮಾಡಿ ಘಾಟ್‌ಗೆ ಪತ್ರಕರ್ತರ ಜೊತೆ ಅಧ್ಯಯನ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ ರಾಯಚೂರು ಜಿಲ್ಲೆಯ ಎರಮರಸ್ ಗ್ರಾಮದ ನಿವಾಸಿ ಹಾಗೂ ‘ಪ್ರಜಾವಾಣಿ’ ಪತ್ರಿಕೆಯ ಮಂಗಳೂರು ವರದಿಗಾರ ಹೈಮದ್ ಹುಸೈನ್‌ರ ಪಾರ್ಥಿವ ಶರೀರವನ್ನು ಶನಿವಾರ ಬೆಳಗ್ಗೆ ಅವರ ಮನೆಯವರಿಗೆ ಹಸ್ತಾಂತರಿಸಲಾಯಿತು.

ಶುಕ್ರವಾರ ಬೆಳಗ್ಗೆ ಸುಮಾರು 11 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟ ಬಳಿಕ ಅವರ ಮೃತದೇಹವನ್ನು ಸಂಜೆ ಮಂಗಳೂರಿಗೆ ತರಲಾಗಿತ್ತು. ಈ ಬಗ್ಗೆ ಅವರ ಹೆತ್ತವರು ಮತ್ತು ಸಹೋದರರಿಗೆ ಮಾಹಿತಿ ನೀಡಲಾಗಿತ್ತು. ನಿನ್ನೆ ರಾತ್ರಿ ಸುಮಾರು 10:30ಕ್ಕೆ ಅವರ ಹಿರಿಯ ಸಹೋದರ ಮಂಗಳೂರಿಗೆ ಆಗಮಿಸಿದ್ದರು. ಹಿರಿಯ ಸಹೋದರನ ಅನುಮತಿಯೊಂದಿಗೆ ರಾತ್ರಿ 1 ಗಂಟೆಗೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಇನ್ನೋರ್ವ ಸಹೋದರ ಬೆಳಗ್ಗೆ ಸುಮಾರು 5 ಗಂಟೆಗೆ ಮಂಗಳೂರು ತಲುಪಿದ್ದರು. ಅಂತ್ಯ ಸಂಸ್ಕಾರ

ಶನಿವಾರ ಮುಂಜಾನೆ ನಗರದ ಬಂದರ್‌ನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಹೈಮದ್‌ರ ಮೃತದೇಹದ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಿ, ಬೆಳಗ್ಗೆ ಫಜರ್ ನಮಾಝ್‌ನ ಬಳಿಕ ಮಯ್ಯಿತ್ ನಮಾಝ್ ನೆರವೇರಿಸಲಾಯಿತು. ಅನಂತರ ಬೆಳಗ್ಗೆ 6:15ಕ್ಕೆ ಅವರ ಇಬ್ಬರು ಸಹೋದರರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು. ಶನಿವಾರ ಸಂಜೆ ಸುಮಾರು 5:30ಕ್ಕೆ ಮೃತದೇಹ ರಾಯಚೂರಿನ ಎರಮರಸ್‌ಗೆ ತಲುಪಿರುವುದಾಗಿ ಅವರ ಸಹೋದರ ತಿಳಿಸಿದ್ದಾರೆ. ಅಲ್ಲಿ ಒಂದು ಗಂಟೆ ಕಾಲ ಕುಟುಂಬಸ್ಥರ ಹಾಗೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ತದನಂತರ ಅವರ ಮೃತದೇಹವನ್ನು ಎರಮರಸ್ ಗ್ರಾಮದ ಈದ್ಗಾ ಮಸೀದಿಗೆ ಕೊಂಡೊಯ್ದು ಮಗ್ರಿಬ್ ನಮಾಝಿನ ಬಳಿಕ ವೌಲಾನ ಅಬ್ದುಲ್ ಕರೀಂ ನೇತೃತ್ವದಲ್ಲಿ ಮಯ್ಯಿತ್ ನಮಾಝ್ ನೆರವೇರಿಸಲಾಯಿತು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಡಿಸಿಐಬಿ ಅಮಾನುಲ್ಲಾ, ಜಮಾಅತೆ ಇಸ್ಲಾಮೀ ಹಿಂದ್‌ನ ಮಾಧ್ಯಮ ಕಾರ್ಯದರ್ಶಿ ಶಬ್ಬೀರ್ ಅಹ್ಮದ್, ಹಿರಿಯ ಪತ್ರಕರ್ತರಾದ ತಾರನಾಥ, ಬಾಲಕೃಷ್ಣ ಪುತ್ತಿಗೆ, ಮುಹಮ್ಮದ್ ಆರಿಫ್, ಇರ್ಷಾದ್ ಮತ್ತಿತರ ಪತ್ರಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News