ಬೊಳ್ಳೂರು ಬಳಿ ಬೋರ್‌ವೆಲ್‌ಗೆ ಹಾನಿ: ದೂರು

Update: 2016-04-09 18:35 GMT

ಮುಲ್ಕಿ, ಎ.9: ಪಡುಪಣಂಬೂರು ಗ್ರಾಮ ಪಂಚಾಯತ್ ಬೊಳ್ಳೂರು ಪರಿಸರದ ಜನತೆಯ ನೀರಿನ ಬವಣೆ ನೀಗಿಸುವ ಸಲುವಾಗಿ ಬೊಳ್ಳೂರು ಬಳಿ ನೂತನವಾಗಿ ಕೊರೆಸಿದ್ದ ಬೋರ್‌ವೆಲ್‌ಗೆ ದುಷ್ಕರ್ಮಿಗಳು ಹಾನಿಗೊಳಿಸಿರುವ ಬಗ್ಗೆ ಮುಲ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೋರ್‌ವೆಲ್‌ಗೆ ಮುಚ್ಚಲಾಗಿದ್ದ ಕಬ್ಬಿಣದ ಮುಚ್ಚಳವನ್ನು ಒಡೆದು ಹಾಕಿ ವಿಷ ಪದಾರ್ಥ ಸೇರಿಸಿರುವ ಬಗ್ಗೆ ಸಾರ್ವಜನಿಕರು ಶಂಕೆ ವ್ಯಕ್ತ ಪಡಿಸಿದ್ದು, ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಲು ಸಾರ್ವಜನಿಕರು ನಿರ್ಧರಿಸಿದ್ದಾರೆ.

ದುಷ್ಕರ್ಮಿಗಳು ವ್ಯವಸ್ಥಿತ ರೀತಿಯಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯ ಮಹಿಳೆಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆ ಇಲ್ಲಿನ ಬೋರ್‌ವೆಲ್ ಕೆಟ್ಟು ಹೋಗಿರುವ ಕಾರಣ ನೂತನ ಬೋರ್‌ವೆಲ್ ಕೊರೆಸಲು ಪಡುಪಣಂಬೂರು ಗ್ರಾಪಂ ತಯಾರಿಗಳನ್ನು ನಡೆಸಿತ್ತು. ಆ ವೇಳೆ ಸಮೀಪದ ಮನೆಯವರೊಬ್ಬರು ತಗಾದೆ ಎತ್ತಿದ ಪರಿಣಾಮ ಬೋರ್‌ವೆಲ್ ಕೊರೆಸುವ ಕೆಲಸ ಕೈಬಿಡಲಾಗಿತ್ತು. ಆದರೆ ತಿಂಗಳಿನಿಂದ ಈ ಪರಿಸರದಲ್ಲಿರುವ ಸುಮಾರು ಸಾವಿರಕ್ಕೂ ಹೆಚ್ಚಿನ ಕುಟುಂಬಗಳಿಗೆ ನೀರಿನ ಅಭಾವ ಹೆಚ್ಚಾದ ಪರಿಣಾಮ ಸುಮಾರು 1 ಲಕ್ಷ ರೂ. ವೆಚ್ಚದಲ್ಲಿ ನೂತನ ಬೋರ್‌ವೆಲ್ ಕೊರೆಸಿತ್ತು.

  ಪ್ರಕರಣದ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಜಿಪಂ ಸದಸ್ಯ ವಿನೋದ್ ಬೊಳ್ಳೂರು, ಗ್ರಾಪಂ ಅಧ್ಯಕ್ಷ ಮೋಹನ್‌ದಾಸ್, ತಾ ಪಂ ಮಾಜಿ ಸದಸ್ಯ ಸುಂದರ್ ಭೇಟಿ ನೀಡಿದ್ದರು. ಮುಲ್ಕಿ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News