ಪ್ರಕಾಶ್‌ರಾಜ್ , ಈಗ ಬಾಲಿವುಡ್ ನಿರ್ದೇಶಕ
2011ರಲ್ಲಿ ತೆರೆಕಂಡ ‘ಸಾಲ್ಟ್ ಆ್ಯಂಡ್ ಪೆಪ್ಪರ್’, ಮಲಯಾಳಂ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಆನಂತರ ಬಹುಭಾಷಾ ನಟ, ಕನ್ನಡಿಗ ಪ್ರಕಾಶ್ ರಾಜ್ ಈ ಚಿತ್ರವನ್ನು ‘ಒಗ್ಗರಣೆ’ ಹೆಸರಿನಲ್ಲಿ ಕನ್ನಡಕ್ಕೆ ರಿಮೇಕ್ ಮಾಡಿದ್ದರು. ಕನ್ನಡ ಪ್ರೇಕ್ಷಕರೂ ಚಿತ್ರಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಿದ್ದರು. ಆನಂತರ ತಮಿಳಿನಲ್ಲಿಯೂ ಈ ಚಿತ್ರವು ‘ಉಲವಚ್ಚಾರು ಬಿರಿಯಾನಿ’ ಎಂಬ ಹೆಸರಿನಲ್ಲಿ ರಿಮೇಕ್ ಭಾಗ್ಯ ಕಂಡಿತ್ತು. ಇದೀಗ ಪ್ರಕಾಶ್‌ರಾಜ್, ಸಾಲ್ಟ್ ಆ್ಯಂಡ್ ಪೆಪ್ಪರನ್ನು ಬಾಲಿವುಡ್‌ನಲ್ಲೂ ರಿಮೇಕ್ ಮಾಡಲಿದ್ದಾರೆ. ಆ ಮೂಲಕ ಬಾಲಿವುಡ್‌ನಲ್ಲಿ ನಿರ್ದೇಶಕನಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವ ಪ್ರಯತ್ನದಲ್ಲಿದ್ದಾರೆ. ಹಲವು ಬಾಲಿವುಡ್ ಚಿತ್ರಗಳಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿರುವ ಪ್ರಕಾಶ್ ರಾಜ್‌ಗೆ ಈ ಚಿತ್ರವು ಹೊಸ ಬ್ರೇಕ್ ನೀಡಲಿದೆ. ಸದ್ಯಕ್ಕೆ ಪ್ರಕಾಶ್‌ರಾಜ್ ಚಿತ್ರಕ್ಕಾಗಿ ಪೂರ್ವಸಿದ್ಧತೆಯಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರಕಥೆ ಈಗಾಗಲೇ ಸಿದ್ಧಗೊಂಡಿದ್ದು, ಮುಂದಿನ ತಿಂಗಳೊಳಗೆ ಶೂಟಿಂಗ್ ಆರಂಭಿಸುವುದು ಗ್ಯಾರಂಟಿ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ‘ತಡ್ಕಾ’ ಎಂದು ಹೆಸರಿಡಲಾದ ಈ ಚಿತ್ರದಲ್ಲಿ ನಾನಾ ಪಟೇಕರ್ ಹಾಗೂ ಶ್ರೇಯಾ ಶರಣ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಬಾಲಿವುಡ್ ಚಿತ್ರ ಬೇಬಿಯಲ್ಲಿ ಮಿಂಚಿದ್ದ ತೆಲುಗಿನ ಖ್ಯಾತ ನಟಿ ತಾಪ್ಸಿ ಪನ್ನು ಕೂಡಾ ಇದ್ದಾರೆ. ತಪ್ಪಿ ಬರುವ ಫೋನ್ ಕರೆಯ ಮೂಲಕ ನಾಯಕ, ನಾಯಕಿಯರ ನಡುವೆ ಪರಿಚಯವೇರ್ಪಟ್ಟು, ಇಬ್ಬರಿಗೂ ವಿಚಿತ್ರ ಸನ್ನಿವೇಶಗಳಲ್ಲಿ ಅವರ ನಡುವೆ ಪ್ರೇಮ ಅಂಕುರಗೊಳ್ಳುವ ಸರಳ, ಸುಂದರ ಕಥಾ ವಸ್ತುವನ್ನು ಈ ಚಿತ್ರ ಹೊಂದಿದೆ.
ಶ್ರೇಯಾ ಶರಣ್
ತಾಪ್ಸಿ ಪನ್ನು