ಮುಂದಿನ ಜೇಮ್ಸ್ ಬಾಂಡ್ ಆಗುವಿರಾ ಎಂಬ ಪ್ರಶ್ನೆಗೆ ಶಾರುಖ್ ಖಾನ್ ಉತ್ತರವೇನು?
Photo : PTI
ಬಿಬಿಸಿ ನ್ಯೂಸ್ ಇಂಡಿಯಾ ಜೊತೆಗೆ ಮಾತುಕತೆಯಲ್ಲಿ ಶಾರುಖ್ ಜೇಮ್ಸ್ ಬಾಂಡ್ ಚಿತ್ರದಲ್ಲಿ ನಟನೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಮುಂದಿನ ಜೇಮ್ಸ್ ಬಾಂಡ್ ಆಗುವಿರಾ?” ಎನ್ನುವ ಪ್ರಶ್ನೆಗೆ ಅವರು ಏನು ಉತ್ತರಿಸಿದ್ದಾರೆ ಗೊತ್ತೆ?
ಜೇಮ್ಸ್ ಬಾಂಡ್ 007 ಭವಿಷ್ಯವೇನು ಎನ್ನುವ ಬಗ್ಗೆ ಇನ್ನೂ ಗೊಂದಲವಿದೆ. ‘ನೋ ಟೈಮ್ ಟು ಡೈ’ ಜೇಮ್ಸ್ಬಾಂಡ್ ಸಿನಿಮಾದ ನಂತರ ಡೇನಿಯಲ್ ಗ್ರೇಗ್ ಮುಂದಿನ ಆವೃತ್ತಿಯಲ್ಲಿ ಇರುವುದಿಲ್ಲ. ಹೀಗಾಗಿ ಹೊಸ ಜೇಮ್ಸ್ ಬಾಂಡ್ ಯಾರೆನ್ನುವ ಪ್ರಶ್ನೆ ಹಾಲಿವುಡ್ ಅನ್ನು ಕಾಡುತ್ತಿದೆ. ಹೊಸ ಜೇಮ್ಸ್ ಬಾಂಡ್ ಪಾತ್ರ ಯಾರು ನಿರ್ವಹಿಸುತ್ತಾರೆ ಎನ್ನುವ ಬಗ್ಗೆ ಹಾಲಿವುಡ್ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆರಾನ್ ಟೇಲರ್- ಜಾನ್ಸನ್ ಮತ್ತು ಕಾಲಂ ಟರ್ನರ್ ಅವರ ಹೆಸರು ಹರಿದಾಡುತ್ತಿವೆ. ಆದರೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಎಂದಾದರೂ ಈ ಪ್ರಸಿದ್ಧ ಪಾತ್ರ ನಿರ್ವಹಿಸುವ ಬಗ್ಗೆ ಆಲೋಚಿಸಿದ್ದಾರೆಯೆ? ತಮ್ಮ ಡಿಡಿಎಲ್ಜೆ ಸಹನಟಿ ಕಾಜೋಲ್ ಜೊತೆಗೆ ಕಂಚಿನ ಪ್ರತಿಮೆಯನ್ನು ಬಿಡುಗಡೆ ಮಾಡಲು ಇತ್ತೀಚೆಗೆ ಲಂಡನ್ಗೆ ತೆರಳಿದ್ದ ಶಾರುಖ್ ಖಾನ್ ಮುಂದೆ ಈ ಪ್ರಶ್ನೆ ಇಡಲಾಗಿತ್ತು. ಅವರು ಏನು ಉತ್ತರಿಸಿದ್ದಾರೆ?
► ಜೇಮ್ಸ್ ಬಾಂಡ್ ಆಗಿ ನಟಿಸುವ ಬಗ್ಗೆ ಶಾರುಖ್ ಅಭಿಪ್ರಾಯವೇನು?
‘ಬಿಬಿಸಿ ನ್ಯೂಸ್ ಇಂಡಿಯಾ’ ಜೊತೆಗೆ ಮಾತುಕತೆಯಲ್ಲಿ ಶಾರುಖ್ ಜೇಮ್ಸ್ ಬಾಂಡ್ ಚಿತ್ರದಲ್ಲಿ ನಟನೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಮುಂದಿನ ಜೇಮ್ಸ್ ಬಾಂಡ್ ಆಗುವಿರಾ?” ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ಇಲ್ಲ, ನನಗೆ ಭಾಷೆಯ ಉಚ್ಛಾರ ಬರುವುದಿಲ್ಲ. ನನಗೆ ಸಾಹಸ ಸಿನಿಮಾಗಳನ್ನು ಮಾಡುವುದು ಇಷ್ಟ. ಆದರೆ ಕಾಜೋಲ್ ನನ್ನ ಜೀವನಕ್ಕೆ ಬಂದಳು. ಕಾಜೋಲ್ ಜೊತೆಗೆ ನಟಿಸುವಾಗ ಸಾಹಸ ಸಿನಿಮಾಗಳನ್ನು ಮಾಡಲು ಸಾಧ್ಯವಿಲ್ಲ. ಹೀಗಾಗಿ ಪ್ರಣಯಸದೃಶ ಸಿನಿಮಾಗಳನ್ನೇ ಮಾಡಬೇಕಾಯಿತು!” ಎಂದು ಹಾಸ್ಯಮಯವಾಗಿ ಉತ್ತರಿಸಿದ್ದಾರೆ.
ಈ ಹಾಸ್ಯಕ್ಕೆ ಉತ್ತರಿಸಿದ ಕಾಜೋಲ್, ತಾನು ನಟಿಸದ ಅನೇಕ ಸಿನಿಮಾಗಳಲ್ಲೂ ಶಾರುಖ್ ನಟಿಸಿರುವುದಾಗಿ ನೆನಪಿಸಿದರು. ಆಗ ಶಾರುಖ್, “ಹೌದು, ನಾವು ಜೊತೆಗೆ ನಟಿಸಿದ ಸಿನಿಮಾಗಳಿಂದಲೇ ಹೆಚ್ಚು ಜನಪ್ರಿಯರಾಗಿದ್ದೇವೆ. ಅದನ್ನು ನಿರಾಕರಿಸಲಾಗದು. ನನಗೆ ಸಾಹಸ ಸಿನಿಮಾಗಳು ಇಷ್ಟವೆಂದು ಕೆಲವೊಂದು ಸಿನಿಮಾಗಳಲ್ಲಿ ಸಾಹಸ ದೃಶ್ಯಗಳನ್ನು ನಿರ್ವಹಿಸಿದ್ದೇನೆ. ನನಗೆ ಜೇಮ್ಸ್ ಬಾಂಡ್ ಗೊತ್ತಿಲ್ಲ. ಆದರೆ ಸಿಯಾನ್ ಕಾನರಿ ಖಂಡಿತಾ ಗೊತ್ತಿದ್ದಾರೆ” ಎಂದು ಉತ್ತರಿಸಿದರು.
► ಹಾಲಿವುಡ್ನ ಪ್ರಸಿದ್ಧ ಜೇಮ್ಸ್ ಬಾಂಡ್ ಸಿನಿಮಾ
ಜೇಮ್ಸ್ ಬಾಂಡ್ ಸಿನಿಮಾದಲ್ಲಿ ಅನೇಕ ಹಾಲಿವುಡ್ ನಟರು ಪಾತ್ರ ನಿರ್ವಹಿಸಿದ್ದಾರೆ. ಅವರಲ್ಲಿ ಸಿಯಾನ್ ಕಾನರಿ, ಡೇವಿಡ್ ನಿವೆನ್, ಜಾರ್ಜ್ ಲೇಜ್ನ್ಬೈ, ರೋಜರ್ ಮೂರೆ, ಟಿಮೊಥಿ ಡಾಲ್ಟನ್, ಪಿಯರ್ಸ್ ಬ್ರೋಸನ್ ಮತ್ತು ಡೇನಿಯಲ್ ಗ್ರೇಗ್ ಮೊದಲಾದ ನಟರು ಸೇರಿದ್ದಾರೆ.
ಕೊನೆಯ ಜೇಮ್ಸ್ ಬಾಂಡ್ ಸಿನಿಮಾ ‘ನೋ ಟೈಮ್ ಟು ಡೈ’ನಲ್ಲಿ ಡೇನಿಯಲ್ ಕ್ರೇಗ್ ಜೇಮ್ಸ್ ಬಾಂಡ್ 007 ಆಗಿ ನಟಿಸಿದ್ದರು. ಮುಂದಿನ ಜೇಮ್ಸ್ ಬಾಂಡ್ ಯಾರು ಎನ್ನುವ ಬಗ್ಗೆ ಯಾವುದೇ ಖಚಿತ ಮಾಹಿತಿ ದೊರೆತಿಲ್ಲ. ‘ಡ್ಯೂನ್’ ಸಿನಿಮಾ ನಿರ್ದೇಶಿಸಿದ ಡೆನಿಸ್ ವಿಲೆನೆಯುವ್ ಮುಂದಿನ ಜೇಮ್ಸ್ ಬಾಂಡ್ ಸಿನಿಮಾ ನಿರ್ದೇಶಿಸಲಿದ್ದಾರೆ.
► ಶಾರುಖ್ ಮುಂದಿನ ಸಿನಿಮಾ ಯಾವುದು?
ಈ ನಡುವೆ ಶಾರುಖ್ ಖಾನ್ ಕೊನೆಯದಾಗಿ ʼಡಂಕಿʼ’ ಸಿನಿಮಾದಲ್ಲಿ ಪೂರ್ಣ ನಾಯಕನ ಪಾತ್ರ ನಿರ್ವಹಿಸಿದ್ದರು. ಇದೀಗ ಅವರ ಮುಂದಿನ ಸಿನಿಮಾ ‘ಕಿಂಗ್’ 2026ರಲ್ಲಿ ಬಿಡುಗಡೆಯಾಗುತ್ತಿದೆ. ಅದರಲ್ಲಿ ಅವರ ಮಗಳು ಸುಹಾನಾ ಖಾನ್ ಅವರೂ ನಟಿಸಿದ್ದಾರೆ. ಈ ನಡುವೆ ಅವರು ಪುತ್ರ ಆರ್ಯನ್ ಖಾನ್ ನಿರ್ದೇಶನದ ‘The Bads of Bollywood’ನಲ್ಲಿ ಸಣ್ಣ ಪಾತ್ರ ನಿರ್ವಹಸಿದ್ದರು.