ರಣ್ವೀರ್ ಸಿಂಗ್ ನಟನೆಯ ʼಧುರಂಧಾರ್' ಗೆ ಅದ್ದೂರಿ ಆರಂಭ
ಪ್ರೇಕ್ಷಕರನ್ನು ರಂಜಿಸಿದ ಮೂರೂವರೆ ಗಂಟೆಗಳ ಸಿನಿಮಾ
ರಣ್ವೀರ್ ಸಿಂಗ್ | Photo Credit : NDTV
17 ವರ್ಷಗಳಲ್ಲಿ ಬಿಡುಗಡೆಯಾದ ಅತಿ ದೊಡ್ಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ 'ಧುರಂಧಾರ್'ನಲ್ಲಿ ರಣ್ವೀರ್ ಸಿಂಗ್ ಪಾಕಿಸ್ತಾನದ ಲಿಯಾರಿಯೊಳಗೆ ನುಸುಳಿ ಭಯೋತ್ಪಾದಕ ಜಾಲವನ್ನು ಕೆಡವುವ ಕತೆಯಿದೆ.
ಸತತ ಯಶಸ್ಸುಗಳನ್ನು ನೀಡಿ ಬಾಲಿವುಡ್ ನ ಸೂಪರ್ ಸ್ಟಾರ್‌ಗಳಲ್ಲಿ ಒಬ್ಬರಾಗಿರುವ ರಣ್ವೀರ್ ಸಿಂಗ್ ಚಿತ್ರರಂಗಕ್ಕೆ ಕಾಲಿಟ್ಟು ಇದೇ ಡಿಸೆಂಬರ್ ಗೆ 15 ವರ್ಷಗಳಾಗಿವೆ. ಈ ಸಂಭ್ರಮಕ್ಕೆ ಬಿಡುಗಡೆ ಮಾಡಿರುವ ಗೂಢಾಚಾರಿಕೆ-ಸಾಹಸ ಮಿಶ್ರಣವಿರುವ ಸಿನಿಮಾ 'ಧುರಂಧಾರ್'ಗೆ ಹಿರಿತೆರೆಯ ಮೇಲೆ ಅದ್ದೂರಿ ಸ್ವಾಗತ ದೊರೆತಿದೆ. ಚಿತ್ರದ ಟ್ರೇಲರ್ ಮತ್ತು ಪ್ರೋಮೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಅಭಿಮಾನಿಗಳಲ್ಲಿ ತೀವ್ರ ನಿರೀಕ್ಷೆ ಹುಟ್ಟಿಸಿತ್ತು. ಇದೀಗ ಮೊದಲನೇ ದಿನವೇ ಅದ್ದೂರಿ ಆರಂಭ ದೊರೆತಿದೆ.
‘ಉರಿ’ ಖ್ಯಾತಿಯ ಆದಿತ್ಯ ಧಾರ್ ನಿರ್ದೇಶನದ 'ಧುರಂಧಾರ್' ಚಿತ್ರದಲ್ಲಿ ರಣವೀರ್ ಜೊತೆ ಅಕ್ಷಯ್ ಖನ್ನಾ, ಸಂಜಯ್ ದತ್, ಆರ್ ಮಾಧವನ್, ಅರ್ಜುನ್ ರಾಂಪಾಲ್ ಮತ್ತು ಸಾರಾ ಅರ್ಜುನ್ ನಟಿಸಿದ್ದಾರೆ. ವಯಸ್ಕರಿಗೆ ಮಾತ್ರ ರೇಟಿಂಗ್ ಹೊಂದಿರುವ ಈ ಚಿತ್ರದಲ್ಲಿ ಮುಂಗಡ ಬುಕಿಂಗ್ ಭಾರತದಲ್ಲಿ ರೂ. 14 ಕೋಟಿ ಗಳಿಸಿದೆ. ತಜ್ಞರ ಪ್ರಕಾರ 250-280 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ ಮೊದಲ ದಿನ ರೂ 15-20 ಕೋಟಿ ಗಳಿಸಿದೆ. ಜೊತೆಗೆ ವಿದೇಶದಲ್ಲಿ ರೂ 10 ಕೋಟಿ ಗಳಿಸುವ ಸಾಧ್ಯತೆ ಇದೆ.
ಸಿನಿಮಾ ನೋಡಿದವರು ರಣ್ವೀರ್ ಸಿಂಗ್ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಈ ಚಿತ್ರದಲ್ಲಿ, ರಣವೀರ್ ಸಿಂಗ್ ಒಬ್ಬ ಭಾರತೀಯ ರಹಸ್ಯ ಗೂಢಚಾರನ ಪಾತ್ರವನ್ನು ನಿರ್ವಹಿಸುತ್ತಾರೆ. ಪಾಕಿಸ್ತಾನದ ಲಿಯಾರಿಯೊಳಗೆ ನುಸುಳಿ ಭಯೋತ್ಪಾದಕ ಜಾಲವನ್ನು ಕೆಡವುವ ಕತೆಯಿದೆ.
ನೈಜ ಜೀವನದ ಘಟನೆಗಳು ಮತ್ತು ಭೌಗೋಳಿಕ ರಾಜಕೀಯದ ಉದ್ವಿಘ್ನತೆಗಳ ಸುತ್ತ ಸಿನಿಮಾದ ಕತೆ ಹೆಣೆಯಲಾಗಿದೆ. ಈ ಸಿನಿಮಾ ಭಾರತದ ಗುಪ್ತಚರ ಸಂಸ್ಥೆ ರೀಸರ್ಚ್ ಆಂಡ್ ಅನಾಲಿಸಿಸ್ ವಿಂಗ್ (ರಾ) ನಡೆಸಿದ ರಹಸ್ಯ ಕಾರ್ಯಾಚರಣೆಗಳು, ವಿಶೇಷವಾಗಿ ಅಪರೇಷನ್ ಲಿಯಾರಿ: ಪಾಕಿಸ್ತಾನದ ಕರಾಚಿಯಲ್ಲಿ ಅಪರಾಧ ಸಿಂಡಿಕೇಟ್ಗಳ ಮೇಲೆ ಸರ್ಕಾರ ನಡೆಸಿದ ಕಾರ್ಯಾಚರಣೆಗಳಿಂದ ಸ್ಫೂರ್ತಿ ಪಡೆದಿದೆ ಎನ್ನಲಾಗಿದೆ. ರಣ್ವೀರ್ ಸಿಂಗ್ ಅವರ ಪಾತ್ರ ಒಬ್ಬ ವ್ಯಕ್ತಿಯನ್ನು ಆಧರಿಸಿಲ್ಲ. ಬದಲಾಗಿ ಪಾಕಿಸ್ತಾನದಲ್ಲಿ ರಹಸ್ಯ ಕಾರ್ಯಾಚರಣೆಗಳನ್ನು ನಡೆಸಿದ ಭಾರತದ ಪ್ಯಾರಾ-ಸ್ಪೆಷಲ್ ಫೋರ್ಸಸ್ ಮತ್ತು ರಾನ ವೀರರ ಸಂಯೋಜನೆಯನ್ನು ಆಧರಿಸಿದೆ.
ಸಿನಿ ಪ್ರೇಮಿಗಳು ಶಾಧ್ವತ್ ಸಚ್ದೇವ್ ಸಂಗೀತವನ್ನು ಪ್ರಶಂಸಿಸಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಖನ್ನಾ ರಣ್ವೀರ್ ಸಿಂಗ್ ಗೆ ಅತ್ಯುತ್ತಮ ಸ್ಪರ್ಧಿಯಾಗಿ ಅಭಿನಯಿಸಿದ್ದಾರೆ ಎನ್ನುವ ಪ್ರಶಂಸೆಯೂ ಕೇಳಿಬಂದಿದೆ. 17 ವರ್ಷಗಳಲ್ಲಿ ಬಿಡುಗಡೆಯಾದ ಅತಿ ಉದ್ದದ ಬಾಲಿವುಡ್ ಸಿನಿಮಾ ಎನ್ನುವ ಖ್ಯಾತಿಯೂ 'ಧುರಂಧಾರ್'ಗೆ ದೊರೆತಿದೆ. ಈ ಸಿನಿಮಾ ಮೂರು ಗಂಟೆ 34 ನಿಮಿಷಗಳ ಕಾಲ ಸಾಗುತ್ತದೆ ಎಂದು ಅದಕ್ಕೆ ನೀಡಿದ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.