ಮಂಗಳೂರು : ಬೇಸಿಗೆ ರಜೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಹೊಸ ಬಸ್‌ಗಳ ಓಡಾಟ
ಮಂಗಳೂರು, ಎ.10: ಬೇಸಿಗೆ ರಜೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಹೊಸ ಬಸ್‌ಗಳ ಓಡಾಟವನ್ನು ನಡೆಸುತ್ತಿದೆ.
ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗಿರುವುದರಿಂದ ಊರಿಗೆ ಹೋಗುವವರ ಮತ್ತು ಪ್ರವಾಸ ತೆರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ರಜೆ ಅವಧಿಯಲ್ಲಿ ಪ್ರಯಾಣಿಕರ ಒತ್ತಡ ಕಡಿಮೆ ಮಾಡಲು ಮಂಗಳೂರು ವಿಭಾಗವು ಬ್ಯುಸಿ ಇರುವ ಕೆಲವು ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಸೇವೆ ಆರಂಭಿಸಿದೆ.
ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಲ್ಲಿ ಒಟ್ಟು 523 ಬಸ್‌ಗಳಿವೆ. ಇದರಲ್ಲಿ ಸ್ಥಳೀಯ ಹಾಗೂ ನರ್ಮ್ ಸಿಟಿಬಸ್‌ಗಳು ಕೂಡ ಸೇರಿದೆ. 523 ಬಸ್‌ಗಳ ಪೈಕಿ ಪ್ರತಿದಿನ 470 ಬಸ್‌ಗಳು ಓಡಾಟ ನಡೆಸುತ್ತದೆ. ಉಳಿದ 53 ಬಸ್‌ಗಳು ವಿಶ್ರಾಂತಿಯಲ್ಲಿರುತ್ತದೆ. ಈ ಬಸ್‌ಗಳನ್ನು ಮದುವೆ ಸಮಾರಂಭ, ಪ್ರವಾಸ , ಪಿಕ್ ನಿಕ್ ಹಾಗೂ ಇತರ ಕಾರಣಗಳಿಗೆ ಬಾಡಿಗೆಗೆ ನೀಡಲಾಗುತ್ತದೆ.
ಮಂಗಳೂರಿನಿಂದ ಪ್ರತಿದಿನ ಸಂಜೆ 5-15 ಕ್ಕೆ ಮಂಗಳೂರು-ಪುಣೆ ನಡುವೆ ಮಲ್ಟಿ ಆ್ಯಕ್ಸಿಲ್ ಬಸ್ ಓಡಾಟ ಆರಂಭವಾಗಿದೆ. ಮಂಗಳೂರು-ಮುಂಬೈ ಮಧ್ಯೆ ಮಲ್ಟಿ ಆ್ಯಕ್ಸಿಲ್ ಬಸ್ ಎ.15ರಿಂದ ಆರಂಭವಾಗಲಿದೆ. ಮೇ 15 ರಿಂದ ಮಂಗಳೂರು-ಬೆಂಗಳೂರು ಮಧ್ಯೆ ಹೊಸ ವೋಲ್ವೋ ಬಸ್ ಸಂಚಾರ ಶುರುವಾಗಲಿದೆ.