ಮಂಗಳೂರು : ಪ್ರಾಮಾಣಿಕತೆ ಮೆರೆದ ಆಟೊ ಚಾಲಕ
ಮಂಗಳೂರು, ಎ. 10: ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ ಚಿನ್ನ ಸಹಿತ ಸುಮಾರು 3.5 ಲಕ್ಷ ರೂ. ನೌಲ್ಯದ ವಸ್ತುಗಳನ್ನು ಹೊಂದಿದ್ದ ಬ್ಯಾಗ್‌ವೊಂದನ್ನು ಅದರ ವಾರೀಸುದಾರರಿಗೆ ಹಸ್ತಾಂತರಿಸುವ ಮೂಲಕ ಆಟೊ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ಇಂದು ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಬಾಬುಗುಡ್ಡ ನಿವಾಸಿಗಳಾದ ಸತೀಶ್ ಎಂಬವರು ಇಂದು ತಮ್ಮ ಕುಟುಂಬಸ್ಥರೊಂದಿಗೆ ಮುಂಬೈಯಿಂದ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಬಂದಿಳಿದಿದ್ದರು. ಈ ಸಂದರ್ಭದಲ್ಲಿ ಅವರು ಪ್ರೀಪೇಡ್ ಆಟೊವೊಂದನ್ನು ಬಾಡಿಗೆಗೆ ಪಡೆದು ಬಾಬುಗುಡ್ಡೆ ಕಡೆಗೆ ತೆರಳಿದ್ದರು. ಆಟೊ ಚಾಲಕ ಅವರನ್ನು ಬಿಟ್ಟು ಹಿಂದಿರುಗಿದ್ದ. ಕೂಡಲೇ ಸತೀಶ್ ಅವರಿಗೆ ಬ್ಯಾಗ್‌ವೊಂದು ಆಟೊದಲ್ಲಿ ಬಾಕಿಯಾದ ಬಗ್ಗೆ ಗಮನಕ್ಕೆ ಬಂದಿತ್ತು. ಆ ಬ್ಯಾಗಿನಲ್ಲಿ ಚಿನ್ನ ಸಹಿತ ಅತ್ಯಮೂಲ್ಯದ ವಸ್ತುಗಳಿದ್ದರಿಂದ ಸತೀಶ್ ತಡಮಾಡದೆ ಸೆಂಟ್ರಲ್ ರೈಲ್ವೆ ಸ್ಟೇಶನ್‌ಗೆ ತೆರಳಿ ಆಟೊ ಚಾಲಕನನ್ನು ಹುಡುಕಾಡಿದರು. ಸಿಗದಿದ್ದಾಗ ಅಲ್ಲಿದ್ದ ಪ್ರೀಪೇಡ್ ಆಟೋ ಕೌಂಟರ್‌ನ್ನು ಸಂಪರ್ಕಿಸಿದರು. ಆದರೆ ಅಲ್ಲೂ ಆಟೋ ಚಾಲಕನ ಬಗೆಗಿನ ಮಾಹಿತಿ ಸಿಗಲಲ್ಲಿ. ಈ ಬಗ್ಗೆ ಇತರ ನಿಲ್ದಾಣದಲ್ಲಿದ್ದ ಆಟೊ ಚಾಲಕರನ್ನು ಸಂಪರ್ಕಿಸಿದಾಗ ಅದರಲ್ಲಿದ್ದ ಒಬ್ಬರು ಇನ್ನೋರ್ವ ಆಟೊ ಚಾಲಕ ಧನಂಜಯ ಎಂಬವರನ್ನು ಮೊಬೈಲ್ ಮೂಲಕ ಫೋನ್ ಮಾಡಿದಾಗ ಆತ ಇದನ್ನು ಒಪ್ಪಿಕೊಂಡು ಕೂಡಲೇ ಸ್ಥಳಕ್ಕೆ ಬಂದು ಸೊತ್ತು ವಾರೀಸುದಾರರಿಗೆ ಒಪ್ಪಿಸಿದ್ದಾರೆ. ಆತ ಒಪ್ಪಿಸಿದ ಬ್ಯಾಗ್‌ನಲ್ಲಿ ಚಿನ್ನದ ಒಡವೆಗಳು, ಎಟಿಎಂ ಕಾರ್ಡ್, ಮೊಬೈಲ್ ಫೋನ್ ಮತ್ತು ನಗದು ಸಹಿತ ಸುಮಾರು ಮೂರುವರೆ ಲಕ್ಷ ರೂ. ವೌಲ್ಯದ ಸೊತ್ತುಗಳು ಒಳಗೊಂಡಿದ್ದವು.