ಅದು ಬೃಹತ್ ಬಾಂಬ್ ಸ್ಫೋಟದಂತಿತ್ತು: ಪ್ರತ್ಯಕ್ಷದರ್ಶಿ
ಕೊಲ್ಲಂ,ಎ.10: ಅದು ಮನೆಯೊಳಗೆ ಯಾರೋ ಭಾರೀ ಬಾಂಬ್‌ನ್ನು ಎಸೆದಂತಿತ್ತು. ಸ್ಫೋಟದ ಪರಿಣಾಮವಾಗಿ ನಮ್ಮ ಮನೆಯ ಛಾವಣಿಯೇ ಕುಸಿದು ಬಿದ್ದಿದೆ. ನಾವು ಮರಳಿದಾಗ ನಮ್ಮ ಕಣ್ಣಿಗೆ ಬಿದ್ದಿದ್ದು ಅತ್ಯಂತ ಭೀಕರ ದೃಶ್ಯ. ನಮ್ಮ ಹೃದಯಗಳು ಒಡೆದು ಹೋಗಿದ್ದವು...ಮಾತುಗಳೇ ಹೊರಡುತ್ತಿರಲಿಲ್ಲ. ಸುತ್ತಮುತ್ತಲೂ ಎಲ್ಲೆಂದರಲ್ಲಿ ಮಾನವ ದೇಹಗಳ ಅಂಗಾಂಗಗಳು ಹರಡಿ ಬಿದ್ದಿದ್ದವು. ಕುಸಿದು ಬಿದ್ದ ಗೋಡೆಗೆ ಕಾಲೊಂದು ನೇತಾಡುತ್ತಿತ್ತು. ಅಲ್ಲಿ ಏನೂ ಇರಲಿಲ್ಲ,ಎಲ್ಲವೂ ನಾಶಗೊಂಡಿತ್ತು : ಇವು ಇಲ್ಲಿಯ ಪುಟ್ಟಿಂಗಾಲ್ ದೇವಸ್ಥಾನದಲ್ಲಿ ರವಿವಾರ ನಸುಕಿನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದ ಪ್ರತ್ಯಕ್ಷದರ್ಶಿಯಾಗಿರುವ ಅನಿತಾ ಪ್ರಕಾಶ್ ಅವರ ನೋವಿನ ಮಾತುಗಳು.
ಬ್ರಿಟನ್ ಪ್ರಜೆಯಾಗಿರುವ ಅನಿತಾ ರಜೆಯಲ್ಲಿ ತನ್ನೂರಿಗೆ ಬಂದಿದ್ದಾರೆ. 102ಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಂಡಿರುವ ದುರಂತ ಸಂಭವಿಸಿದ ದೇವಸ್ಥಾನಕ್ಕೆ ಹೊಂದಿಕೊಂಡೇ ಅವರ ಮನೆಯಿದೆ.
ಇದೊಂದು ಮಾನವ ನಿರ್ಮಿತ ದುರಂತ ಎಂದು ಬಣ್ಣಿಸಿದ ಅನಿತಾ, ಸ್ಥಳೀಯ ನಿವಾಸಿಗಳು ಹಲವಾರು ವರ್ಷಗಳಿಂದಲೂ ಸಿಡಿಮದ್ದು ಪ್ರದರ್ಶನವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಆದರೆ ಅವರಿಗೆ ಬೆದರಿಕೆಗಳನ್ನು ಒಡ್ಡಲಾಗುತ್ತಿತ್ತು. ಇದನ್ನು ನಿಲ್ಲಿಸಲು ಸರಕಾರವು ಏನನ್ನೂ ಮಾಡಲೇ ಇಲ್ಲ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ ಹೇಳಿದರು.
ಅಂದ ಹಾಗೆ ಅನಿತಾರ ತಾಯಿ ಈ ಉತ್ಸವದ ವಿರುದ್ಧ ಕೊಲ್ಲಂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು,ಅವರು ಸ್ಥಳಕ್ಕೆ ಭೇಟಿಯನ್ನೂ ನೀಡಿದ್ದರು. ಸುಡುಮದ್ದು ಪ್ರದರ್ಶನವನ್ನು ನಿಷೇಧಿಸಲಾಗಿದೆ ಎಂಬ ಮಾಹಿತಿಯೂ ಆ ಕುಟುಂಬಕ್ಕೆ ಲಭಿಸಿತ್ತು. ಶನಿವಾರ ಮಧ್ಯಾಹ್ನ ದೇವಸ್ಥಾನದಿಂದ 10-12 ಕುಪಿತ ಯುವಕರ ಗುಂಪೊಂದು ಅನಿತಾರ ಮನೆಗೆ ಬಂದು ವಾಚಾಮಗೋಚರವಾಗಿ ನಿಂದಿಸಿತ್ತು. ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ತಕರಾರನ್ನು ಹಿಂದೆಗೆದುಕೊಳ್ಳುವಂತೆ ಆ ಗುಂಪು ಬೆದರಿಕೆಯನ್ನೊಡ್ಡಿತ್ತು. ಆದರೆ ಅನಿತಾರ ಕುಟುಂಬ ಅದಕ್ಕೆ ಮಣಿದಿರಲಿಲ್ಲ.
ಸುರಕ್ಷತಾ ಕ್ರಮವಾಗಿ ಅನಿತಾ ಮತ್ತು ಕುಟುಂಬದವರು ಶನಿವಾರ ಸಂಜೆ ತಮ್ಮ ಮನೆಗಳಿಂದ ದೂರವಿರುವಂತೆ ಸೂಚಿಸಲಾಗಿತ್ತು. ದೇವಳದ ಅಧಿಕಾರಿಗಳೊಂದಿಗೆ ವಾದಕ್ಕಿಳಿಯದೆ ಅವರೆಲ್ಲ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದರು ಮತ್ತು ಇದು ಅವರ ಪ್ರಾಣಗಳನ್ನು ಉಳಿಸಿತ್ತು.
ಭಾರೀ ಸ್ಫೋಟ ಸಂಭವಿಸುವ ಎರಡು ಗಂಟೆ ಮೊದಲು ವ್ಯಕ್ತಿಯೋರ್ವ ಗಾಯಗೊಂಡಿದ್ದಾಗಲೇ ಸುಡುಮದ್ದು ಪ್ರದರ್ಶನವನ್ನು ನಿಲ್ಲಿಸಿದ್ದರೆ ಈ ಭೀಕರ ಅನಾಹುತ ಸುಲಭದಲ್ಲಿ ತಪ್ಪುತ್ತಿತ್ತು ಎಂದು ಅನಿತಾ ಹೇಳಿದರು.