ರಾಜ್ಯದಿಂದ ವೈದ್ಯರ ತಂಡ ರವಾನೆ
ಬೆಂಗಳೂರು, ಎ.10: ಕೇರಳದ ಕೊಲ್ಲಂ ಸಮೀಪದ ದೇಗುಲದಲ್ಲಿ ಸಂಭವಿಸಿದ ಅಗ್ನಿ ಅನಾಹುತ ಪ್ರಕರಣದ ಹಿನ್ನೆಲೆಯಲ್ಲಿ ಅಗತ್ಯ ಔಷಧಗಳೊಂದಿಗೆ 10 ಮಂದಿ ವೈದ್ಯರ ತಂಡವನ್ನು ಕೇರಳಕ್ಕೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿ ಸಂಭವಿಸಿದ ಅಗ್ನಿ ಅನಾಹುತ ಪ್ರಕರಣಕ್ಕೆ ಸಂಬಂಧಿಸಿ ಕೇರಳ ರಾಜ್ಯಕ್ಕೆ ನೆರವು ನೀಡಲು ರಾಜ್ಯ ಸರಕಾರ ತೀರ್ಮಾನಿಸಿದ್ದು, ಈಗಾಗಲೇ ಅಗತ್ಯ ಔಷಧಿಗಳೊಂದಿಗೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯೆ ಡಾ.ಸ್ಮಿತಾ ನೇತೃತ್ವದಲ್ಲಿ 10 ಮಂದಿ ವೈದ್ಯರ ತಂಡ ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಯ ತಂಡವನ್ನು ಕೇರಳಕ್ಕೆ ರವಾನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಗಾಯಾಳುಗಳಿಗೆ ನಿರಂತರವಾಗಿ ಚಿಕಿತ್ಸೆ ನೀಡುವಂತೆ ವೈದ್ಯರ ತಂಡಕ್ಕೆ ನಿರ್ದೇಶನ ನೀಡಲಾಗಿದೆ. ಔಷಧಿಗಳ ಕೊರತೆಯುಂಟಾದರೆ, ಮಾರುಕಟ್ಟೆಯಲ್ಲಿ ಕೊಂಡು ಚಿಕಿತ್ಸೆ ನೀಡಲು ಹೇಳಲಾಗಿದೆ. ವೈದ್ಯರು ಮಾರುಕಟ್ಟೆಯಲ್ಲಿ ಕೊಂಡ ಔಷಧಿಗಳ ಬಿಲ್ನ್ನು ನೀಡಿದರೆ, ವೆಚ್ಚವನ್ನು ರಾಜ್ಯ ಸರಕಾರ ನೋಡಿಕೊಳ್ಳುತ್ತದೆ. ಒಂದು ವೇಳೆ ಮತ್ತಷ್ಟು ವೈದ್ಯರ ಅಗತ್ಯಬಿದ್ದರೆ ಕಳುಹಿಸಿಕೊಡಲಾಗುತ್ತದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡವರಿಗೆ ರಕ್ತದ ಅಗತ್ಯವಿದ್ದರೆ ಕಳುಹಿಸಿಕೊಡಲಾಗುವುದು. ಈಗಾಗಲೇ ರಕ್ತದ ಸಂಗ್ರಹಣೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಎಲ್ಲ ಬೆಳವಣಿಗೆಗಳ ಕುರಿತು ಕೇರಳದ ಆರೋಗ್ಯ ಸಚಿವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಅವರು ಹೇಳಿದರು.