ಅನುಮತಿ ನೀಡಿರಲಿಲ್ಲ: ಜಿಲ್ಲಾಡಳಿತ
ಕೊಲ್ಲಂ,ಎ.10: ಕೊಲ್ಲಂ ಸಮೀಪದ ಪರವೂರ್‌ನ ಪುಟ್ಟಿಂಗಲ್ ದೇವಿ ದೇವಾಲಯದಲ್ಲಿ ಭೀಕರ ಅನಾಹುತಕ್ಕೆ ಕಾರಣವಾದ ಸಿಡಿಮದ್ದು ಪ್ರದರ್ಶನ ನಡೆಸಲು ಅನುಮತಿ ನೀಡಿರಲಿಲ್ಲವೆಂದು ಕೊಲ್ಲಂ ಜಿಲ್ಲಾಧಿಕಾರಿ ಎ. ಶೈನಾಮೋಲ್ ಅವರ ಕಚೇರಿಯ ಮೂಲಗಳು ತಿಳಿಸಿವೆ. ಆದರೆ ರವಿವಾರ ತಡರಾತ್ರಿ ವೇಳೆಗೆ ಜಿಲ್ಲಾಡಳಿತ ನಿಷೇಧವನ್ನು ಹಿಂತೆಗೆದುಕೊಂಡಿತ್ತೆಂದು ಸ್ಥಳೀಯ ನಿವಾಸಿಗಳು ಆಪಾದಿಸಿದ್ದಾರೆ. ದೇಗುಲ ಸಂಕೀರ್ಣ ಸಮೀಪದ ನಿವಾಸಿ ಪಂಕಜಾಕ್ಷಿ ಎಂಬವರು ನೀಡಿದ ದೂರಿನ ಮೇರೆಗೆ ಸಿಡಿಮದ್ದು ಪ್ರದರ್ಶನವನ್ನು ಜಿಲ್ಲಾಡಳಿತ ನಿಷೇಧಿಸಿತ್ತು. ತಾನು ದೂರು ನೀಡಿದ್ದಕ್ಕಾಗಿ ದೇಗುಲದ ಅಧಿಕಾರಿಗಳು ತನಗೆ ಬೆದರಿಕೆಯೊಡ್ಡಿದ್ದರೆಂದು ಪಂಕಜಾಕ್ಷಿ ಆಪಾದಿಸಿದ್ದಾರೆ.
ಆದರೆ ತಡರಾತ್ರಿ ವೇಳೆ ‘ಒಪ್ಪಂದ’ ವೇರ್ಪಟ್ಟು, ನಿಷೇಧವನ್ನು ಹಿಂತೆಗೆಯಲಾಗಿತ್ತೆಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. ಆದಾಗ್ಯೂ, ಸಿಡಿಮದ್ದು ಪ್ರದರ್ಶನಕ್ಕೆ ಪೊಲೀಸರು ಯಾವುದೇ ಅನುಮತಿ ನೀಡಿರಲಿಲ್ಲವೆಂದು ಕೊಲ್ಲಂ ನಗರ ಪೊಲೀಸ್ ಆಯುಕ್ತ ಪಿ. ಪ್ರಕಾಶ್ ತಿಳಿಸಿದ್ದಾರೆ. ದುರಂತಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದ್ದು, ತಿರುವನಂತಪುರದ ಅಪರಾಧ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆಂದು ಅವರು ಹೇಳಿದ್ದಾರೆ. ಈ ಘಟನೆಯನ್ನು ಕ್ರಿಮಿನಲ್ ಕೃತ್ಯವೆಂಬುದಾಗಿ ಪರಿಗಣಿಸಲಾಗಿದ್ದು, ಅಗ್ನಿಶಾಮಕದಳದ ವಿಶೇಷ ತಂಡವೊಂದು ತನಿಖೆ ನಡೆಸಲಿದೆಯೆಂದು ಅವರು ಹೇಳಿದ್ದಾರೆ.