ಕೊಲ್ಲಂ ದೇಗುಲದಲ್ಲಿ ಭೀಕರ ಅಗ್ನಿ ದುರಂತ: ಕನಿಷ್ಠ 110 ಬಲಿ
♦ 350ಕ್ಕೂ ಅಧಿಕ ಮಂದಿಗೆ ಗಾಯ ♦ ಪರವೂರ್ ಪುಟ್ಟಿಂಗಲ್ ದೇವಿ ದೇವಸ್ಥಾನದಲ್ಲಿ ದುರಂತ ♦ ರವಿವಾರ ಮುಂಜಾನೆ 3:30ರ ವೇಳೆಗೆ ಸಿಡಿಮದ್ದು ಪ್ರದರ್ಶನದ ಅಂತಿಮಘಟ್ಟದಲ್ಲಿ ಸಂಭವಿಸಿದ ದುರಂತ ♦ ಕೊಲ್ಲಂಗೆ ಪ್ರಧಾನಿ ಭೇಟಿ;2 ಲಕ್ಷ ರೂ. ಪರಿಹಾರ ಘೋಷಣೆ ♦ ದುರಂತ ಸ್ಥಳಕ್ಕೆ ಕೇರಳ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಭೇಟಿ; ತುರ್ತು ಸಂಪುಟ ಸಭೆ ಕೇರಳ ಸರಕಾರದಿಂದ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ, ಗಾಯಾಳುಗಳಿಗೆ ತಲಾ 50 ಸಾವಿರ ರೂ. ♦ ಘಟನೆ ಬಗ್ಗೆ ಕ್ರೈಂ ಬ್ರಾಂಚ್ ತನಿಖೆಗೆ ಆದೇಶ ♦ ಜಿಲ್ಲಾಡಳಿತದ ಅನುಮತಿಯಿಲ್ಲದೆ ಸಿಡಿಮದ್ದು ಪ್ರದರ್ಶನ ಆಯೋಜಿಸಿದ್ದ ದೇಗುಲದ ಆಡಳಿತ ಮಂಡಳಿ; 5 ಮಂದಿ ಕಸ್ಟಡಿಗೆ
ಕೊಲ್ಲಂ, ಎ.10: ಕೇರಳ ರವಿವಾರ ಮುಂಜಾನೆ ಭೀಕರ ಅಗ್ನಿದುರಂತಕ್ಕೆ ಸಾಕ್ಷಿಯಾಯಿತು. ಕೊಲ್ಲಂ ಸಮೀಪದ ಪರವೂರ್ ಪುಟ್ಟಿಂಗಲ್ ದೇವಿ ದೇವಸ್ಥಾನದ ವರ್ಷಾವಧಿ ಉತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಸಿಡಿಮದ್ದು ಪ್ರದರ್ಶನದ ವೇಳೆ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ 110 ಮಂದಿ ಮೃತಪಟ್ಟಿದ್ದು, 350ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ದೇವಸ್ಥಾನದ ‘ಮೀನಾಭರಣಿ’ ಮಹೋತ್ಸವಕ್ಕೆ ಸಂಬಂಧಿಸಿ, ಮಧ್ಯರಾತ್ರಿಯಿಂದ ಏರ್ಪಡಿಸಲಾದ ಸಿಡಿಮದ್ದು ಪ್ರದರ್ಶ ನವನ್ನು ವೀಕ್ಷಿಸಲು ದೇವಾಲಯದ ಆವರಣದಲ್ಲಿ ಸಹಸ್ರಾರು ಜನರು ನೆರೆದಿದ್ದರು. ಮುಂಜಾನೆ 3:15ರ ವೇಳೆಗೆ ಪಟಾಕಿಯ ಕಿಡಿಯೊಂದು ದೇಗುಲದ ದಕ್ಷಿಣ ಭಾಗದಲ್ಲಿ ಸಿಡಿಮದ್ದುಗಳನ್ನು ಸಂಗ್ರಹಿಸಿಡಲಾಗಿದ್ದ ಕಟ್ಟಡದ ಮೇಲೆ ಬಿದ್ದಿತು. ಕೂಡಲೇ ಅಲ್ಲಿದ್ದ ಪಟಾಕಿಗಳು ಸ್ಫೋಟಗೊಂಡು ಭಾರೀ ಬೆಂಕಿ ಅನಾಹುತ ಸಂಭವಿಸಿತೆಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಅದರ ಸದ್ದು 2 ಕಿ.ಮೀ. ದೂರದವರೆಗೂ ಕೇಳಿದ್ದು, ಭೂಮಿ ನಡುಗಿದ ಅನುಭವಾಗಿತ್ತು. ಸ್ಫೋಟದಿಂದಾಗಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡು, ಇಡೀ ಪ್ರದೇಶದಲ್ಲಿ ಕತ್ತಲಾವರಿಸಿತ್ತು. ಸಿಡಿಮದ್ದುಗಳ ಭೀಕರ ಸ್ಫೋಟಗಳ ನಡುವೆ ಭಯಭೀತರಾದ ಜನರು ದಿಕ್ಕಾ ಪಾಲಾಗಿ ಓಡತೊಡಗಿದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಭೀಕರ ಅಗ್ನಿಕಾಂಡದಲ್ಲಿ 110 ಮಂದಿ ಮೃತಪಟ್ಟು, 350ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು ಸಾವಿನ ಸಂಖ್ಯೆ ಇನ್ನೂ ಏರುವ ಭೀತಿಯಿದೆ. ಮೃತಪಟ್ಟವರಲ್ಲಿ ಹಲವಾರು ಮಹಿಳೆಯರು ಹಾಗೂ ಮಕ್ಕಳೂ ಸೇರಿದ್ದಾರೆಂದು ತಿಳಿದುಬಂದಿದೆ.
ಪ್ರಬಲವಾದ ಸ್ಫೋಟದಿಂದಾಗಿ ದೇವಸ್ಥಾನದ ಕಚೇರಿಯು ಸಂಪೂರ್ಣವಾಗಿ ಕುಸಿದುಬಿದ್ದಿದೆ. ದೇಗುಲದ ಕಟ್ಟಡದ ಕೆಲವು ಭಾಗಗಳಿಗೂ ಹಾನಿಯುಂಟಾಗಿದೆ. ಪರಿಸರದಲ್ಲಿರುವ ಅನೇಕ ಮನೆಗಳು ಹಾಗೂ ಕಟ್ಟಡಗಳಿಗೂ ಭಾರೀ ಹಾನಿಯುಂಟಾಗಿದೆ. ಸಿಡಿಮದ್ದು ಪ್ರದರ್ಶನದ ವೀಕ್ಷಣೆಗಾಗಿ ನಿರ್ಮಿಸಲಾಗಿದ್ದ ಕಾಂಕ್ರಿಟ್ ನಿರ್ಮಿತ ಗೋಪುರವು ಸ್ಫೋಟದಿಂದಾಗಿ ಕುಸಿದುಬಿದ್ದ ಪರಿಣಾಮವಾಗಿ ಹಲವರು ಮೃತಪಟ್ಟರೆಂದು ಮೂಲಗಳು ತಿಳಿಸಿವೆ. ದುರಂತ ನಡೆದ ಕೆಲವು ನಿಮಿಷಗಳ ಕಾಲ ಇಡೀ ಪ್ರದೇಶ ಬೆಂಕಿಯ ಗೋಳದಂತೆ ಕಾಣುತ್ತಿತ್ತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬೆಂಕಿಯನ್ನು ಈಗ ನಿಯಂತ್ರಿಸಲಾಗಿದ್ದು, ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ಭರದಿಂದ ಸಾಗುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.
ಪುಟ್ಟಿಂಗಲ್ ದೇವಾಲಯದ ವರ್ಷಾವಧಿ ಉತ್ಸವದ ವೇಳೆ ನಡೆಯುವ ಸಿಡಿಮದ್ದು ಪ್ರದರ್ಶನ ಸ್ಪರ್ಧೆಯು ಅತ್ಯಂತ ಪ್ರಸಿದ್ಧವಾಗಿದ್ದು, ಅದನ್ನು ವೀಕ್ಷಿಸಲು ದೂರದೂರಗಳಿಂದಲೂ ಜನರು ಆಗಮಿಸುತ್ತಾರೆ.
ಅಗ್ನಿ ಅವಘಡದಿಂದ ಜನರನ್ನು ರಕ್ಷಿಸಲು ಬೃಹತ್ ಕಾರ್ಯಾಚರಣೆಯನ್ನು ತಕ್ಷಣವೇ ಆರಂಭಿಸಲಾಗಿದೆ. ದುರಂತ ಸ್ಥಳದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲು ಆರು ಹೆಲಿಕಾಪ್ಟರ್‌ಗಳು ಹಾಗೂ ಒಂದು ಡೋರ್ನಿಯರ್ ಕಿರುವಿಮಾನವನ್ನು ಕೂಡಾ ಬಳಸಲಾಗಿದೆ. ಗಂಭೀರವಾಗಿ ಗಾಯಗೊಂಡ ಕೆಲವು ಗಾಯಾಳುಗಳನ್ನು ಕೊಲ್ಲಂ ಹಾಗೂ ತಿರುವನಂತಪುರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಭೀಕರ ಅಗ್ನಿದುರಂತಕ್ಕೆ ಸಾಕ್ಷಿಯಾದ ಪುಟ್ಟಿಂಗಲ್ ದೇವಾಲಯದಲ್ಲಿ ಸಿಡಿಮದ್ದು ಪ್ರದರ್ಶನ ಸ್ಪರ್ಧೆ ನಡೆಸಲು ಕೊಲ್ಲಂ ಜಿಲ್ಲಾಧಿಕಾರಿ ಅನುಮತಿ ನೀಡಿರಲಿಲ್ಲವೆಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ತಿಳಿಸಿದ್ದಾರೆ.
ಈ ಮಧ್ಯೆ ಜಿಲ್ಲಾಧಿಕಾರಿ ಎ. ಶೈನಾಮೋಲ್ ಹೇಳಿಕೆಯೊಂದನ್ನು ನೀಡಿ, ಉತ್ಸವದ ಸಂದರ್ಭದಲ್ಲಿ ಸಿಡಿಮದ್ದುಪ್ರದರ್ಶ ಸ್ಪರ್ಧೆಗೆ ದೇವಾಲಯದ ಆಡಳಿತಾಧಿಕಾರಿಗಳು ಅನುಮತಿ ಕೋರಿದ್ದರು. ಆದರೆ ತಾನು ಅನುಮತಿ ನೀಡಿರಲಿಲ್ಲವೆಂದು ಆಕೆ ಹೇಳಿದ್ದಾರೆ. ಉತ್ಸವಕ್ಕೂ ಮುನ್ನ ಪರಿಸರದ ನಿವಾಸಿ, ಪಂಕಜಾಕ್ಷಿ ಎಂಬವರು ಸಿಡಿಮದ್ದು ಪ್ರದರ್ಶನವನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಸ್ಥಳೀಯಾಡಳಿತಕ್ಕೆ ದೂರು ನೀಡಿದ್ದರೆಂದು ತಿಳಿದುಬಂದಿದೆ.
ಅಕ್ರಮವಾಗಿ ಸಿಡಿಮದ್ದು ಪ್ರದರ್ಶನವನ್ನು ಆಯೋಜಿಸಿದ ಆರೋಪದಲ್ಲಿ ದೇವಾಲಯದ ಅಧಿಕಾರಿಗಳ ವಿರುದ್ಧ, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಡಿ 307 (ಕೊಲೆ ಯತ್ನ) ಹಾಗೂ 308 (ದಂಡನೀಯವಾದ ನರಹತ್ಯೆಗೆ ಯತ್ನ)ರ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಚುನಾವಣಾ ಪ್ರಚಾರದ ನಿಮಿತ್ತ ಕೇರಳಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತನ್ನ ಇಂದಿನ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿ, ಸ್ಫೋಟದ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ತಿರುವನಂತಪುರಂ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಭೇಟಿ ನೀಡಿದರು.
ಮುಖ್ಯಮಂತ್ರಿ ಉಮ್ಮನ್‌ಚಾಂಡಿ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮೃತರ ಪೈಕಿ 56 ಮಂದಿಯ ಶವಗಲನ್ನು ಗುರುತಿಸಲಾಗಿದ್ದು, ಇತರ ಶವಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆಯೆಂದರು. ಗಾಯಾಳುಗಳ ಸಂಪೂರ್ಣ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆಎಂದು ಅವರು ತಿಳಿಸಿದರು.