ತಲೆಮರೆಸಿಕೊಂಡ ದೇಗುಲದ ಅಧಿಕಾರಿಗಳಿಗಾಗಿ ಶೋಧ
Update: 2016-04-10 23:48 IST
ತಿರುವನಂತಪುರ, ಎ.10: 100ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಸಿಡಿಮದ್ದು ಪ್ರದರ್ಶನವನ್ನು ನಡೆಸಿದ ಕೊಲ್ಲಂ ಜಿಲ್ಲೆಯ ಪುಟ್ಟಿಂಗಲ್ ದೇವಿ ದೇವಾಲಯದ ಅಧಿಕಾರಿಗಳ ಬಂಧನಕ್ಕಾಗಿ ಕೇರಳ ಪೊಲೀಸರು ರವಿವಾರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಪೊಲೀಸರು ದಂಡನೀಯವಾದ ನರಹತ್ಯೆ ಪ್ರಕರಣವನ್ನು ದಾಖಲಿಸಿದ ಬಳಿಕ ಅವರು ತಲೆಮರೆಸಿಕೊಂಡಿದ್ದಾರೆ.
ದೇವಾಲಯದಲ್ಲಿ ಸಿಡಿಮದ್ದು ಪ್ರದರ್ಶನವನ್ನು ಸಂಘಟಿಸಿದ್ದ ಸುರೇಂದ್ರನ್ ಹಾಗೂ ಆತನ ಪುತ್ರ ಉಮೇಶನ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸ್ಫೋಟದಲ್ಲಿ ಇವರಿಬ್ಬರಿಗೂ ಗಾಯಗಳಾಗಿದ್ದು, ಅವರು ತಿರುವನಂತಪುರದ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿಡಿಮದ್ದು ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ದೇಗುಲದ ಆವರಣದಲ್ಲಿ ಸುಮಾರು 15 ಸಾವಿರ ಮಂದಿ ನೆರೆದಿದ್ದರೆಂದು ಘಟನೆಯ ಗಾಯಾಳುವೊಬ್ಬರು ತಿಳಿಸಿದ್ದಾರೆ.