×
Ad

ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ: ಬೆಂಗಳೂರು ಎಂಎಸ್ ರಾಮಯ್ಯ ಕಾಲೇಜು ಪ್ರಥಮ

Update: 2016-04-10 23:59 IST


 

ಉಡುಪಿ, ಎ.10: ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಆಶ್ರಯದಲ್ಲಿ ನ್ಯಾಯವಾದಿ ಪಿ.ಶಿವಾಜಿ ಶೆಟ್ಟಿ ಸ್ಮರಣಾರ್ಥ ನಡೆದ ಎರಡು ದಿನಗಳ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾನೂನು ಕಾಲೇಜು ಪ್ರಥಮ ಹಾಗೂ ಬೆಂಗಳೂರಿನ ಸಿಎಂಆರ್ ಕಾನೂನು ಕಾಲೇಜು ದ್ವಿತೀಯ ಬಹುಮಾನ ಗೆದ್ದುಗೊಂಡಿದೆ.

ಜಡ್ಜ್‌ಮೆಂಟ್ ರೈಟಿಂಗ್ ಸ್ಪರ್ಧೆಯಲ್ಲಿ ಎಂ.ಎಸ್.ರಾಮಯ್ಯ ಪ್ರಥಮ ಮತ್ತು ಮಂಡ್ಯ ಪಿ.ಎಸ್. ಕಾನೂನು ಕಾಲೇಜು ದ್ವಿತೀಯ ಹಾಗೂ ಲೀಗಲ್ ಕ್ವಿಝ್ ಸ್ಪರ್ಧೆಯಲ್ಲಿ ಸಿಎಂಆರ್ ಕಾನೂನು ಕಾಲೇಜು ಪ್ರಥಮ ಮತ್ತು ಎಂ.ಎಸ್. ರಾಮಯ್ಯ ದ್ವಿತೀಯ ಸ್ಥಾನ ಗಳಿಸಿತು. ಉತ್ತಮ ಪುರುಷ ವಕೀಲ ಪ್ರಶಸ್ತಿಯನ್ನು ಬೆಂಗಳೂರು ಕೆಎಲ್‌ಇ ಕಾನೂನು ಕಾಲೇಜಿನ ಸಾಕೇತ್ ಹಾಗೂ ಮಹಿಳಾ ವಕೀಲೆ ಪ್ರಶಸ್ತಿಯನ್ನು ತಮಿಳುನಾಡಿನ ಸಸ್ತ್ರ ಕಾನೂನು ಕಾಲೇಜಿನ ವಿದ್ಯಾರ್ಥಿನಿ ತನ್ನದಾಗಿಸಿಕೊಂಡರು.

ರವಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್, ವಕೀಲರು ಕುಟುಂಬ, ಜಾತಿ, ಧರ್ಮವನ್ನು ಮೀರಿ ತಮ್ಮ ವೃತ್ತಿ ಧರ್ಮವನ್ನು ಪಾಲಿಸಬೇಕು. ಈ ಮೂಲಕ ಸಂವಿಧಾನ ರಕ್ಷಿಸುವ ಕಾರ್ಯ ಮಾಡಬೇಕು. ಸಾಮಾಜಿಕ ದೌರ್ಜನ್ಯಗಳನ್ನು ಪ್ರಶ್ನಿಸುವ ಮನೋಭಾವವನ್ನು ವಕೀಲರು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಕೇರಳ ಹೈಕೋರ್ಟ್ ನ್ಯಾ.ಎ.ಮುಹಮ್ಮದ್ ಮುಷ್ತಾಕ್ ಮಾತನಾಡಿ, ಕಾನೂನು ವ್ಯವಸ್ಥೆಯ ಮೇಲೆ ಖಾಸಗಿ ಹಿಡಿತ ಹಾಗೂ ರಾಜಕೀಯ ಒತ್ತಡ ಹೆಚ್ಚಾಗುತ್ತಿದೆ. ಇಂದಿನ ಆಧುನಿಕ ಕಾಲದಲ್ಲಿ ಸೃಷ್ಟಿಯಾಗುತ್ತಿರುವ ಹೊಸಹೊಸ ಸಮಸ್ಯೆಗಳು ವಕೀಲರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದರು.

ಹಿರಿಯ ವಕೀಲ ಹಾಗೂ ಕರ್ನಾಟಕ ಸರಕಾರದ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಳ್ಳಿ, ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶ್ಯಾನುಭಾಗ್ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಕಾಶ್ ಕಣಿವೆ, ಜಯಂತಿ ಶಿವಾಜಿ ಶೆಟ್ಟಿ, ಉಪನ್ಯಾಸಕರಾದ ಡಾ.ವಿಮಲಾ, ರೋಹಿತ್ ಅಮೀನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News