×
Ad

ಕೊಲ್ಲೂರು ದೇವಳ ಪ್ರಕರಣ: ನಿವೃತ್ತ ಸಿಇಒ ಬಂಧನ

Update: 2016-04-10 23:59 IST

ಕುಂದಾಪುರ, ಎ.10: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಚಿನ್ನಾಭರಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್.ಮಾರುತಿ(61) ಎಂಬವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಶನಿವಾರ ಕುಂದಾಪುರ ನ್ಯಾಯಾಲಯದ ನ್ಯಾಯಾಧೀಶರ ಮನೆ ಮುಂದೆ ಹಾಜರುಪಡಿಸಿದ್ದು, ಒಂದು ದಿನದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೆ ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ.

ಪ್ರಕರಣದ ತನಿಖಾಧಿಕಾರಿ ಕುಂದಾಪುರ ಡಿವೈಎಸ್ಪಿ ಮಂಜುನಾಥ್ ಶೆಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಬಂಧಿತ ಮಾರುತಿ ಐದು ತಿಂಗಳ ಹಿಂದಷ್ಟೆ ಸೇವೆಯಿಂದ ನಿವೃತ್ತಿ ಹೊಂದಿದ್ದರು. 2012ರಿಂದ 2015ರವರೆಗೆ ಸೇವೆ ಸಲ್ಲಿಸಿದ್ದ ಮಾರುತಿ ತನ್ನ ಅವಧಿಯಲ್ಲಿ 138ಗ್ರಾಂ ಚಿನ್ನಾಭರಣ ಸ್ವೀಕರಿಸಿರುವ ಬಗ್ಗೆ ರಶೀದಿ ನೀಡಿ ದಾಖಲೆ ಪುಸ್ತಕದಲ್ಲಿ ಇದನ್ನು ಭರ್ತಿಗೊಳಿಸಿಲ್ಲ. ಅದೇ ರೀತಿ ದೇವಳದ ಸೇವಾ ಕೌಂಟರ್‌ನ ತಿಜೋರಿಯ ನಿರ್ವಹಣೆಯನ್ನು ಡಿ ದರ್ಜೆ ನೌಕರನಿಗೆ ವಹಿಸಿಕೊಟ್ಟಿದ್ದರು. ಹೀಗೆ ಕರ್ತವ್ಯ ಲೋಪ ಎಸಗಿರುವ ಮಾರುತಿ ವಿರುದ್ಧ ಕಸ್ಟೋಡಿಯನ್ ಪ್ರಾಪರ್ಟಿ 409 ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೇವಳದ ಸಿಬ್ಬಂದಿಯಾದ ಶಿವರಾಮ ಮಡಿವಾಳ, ಗಂಗಾಧರ ಹೆಗ್ಡೆ, ನಾಗರಾಜ್ ಶೇರುಗಾರ್, ಗಣೇಶ್ ಪೂಜಾರಿ, ಪ್ರಸಾದ್ ಆಚಾರ್ಯರನ್ನು ಬಂಧಿಸಿದ್ದರು. ಇವರಲ್ಲಿ ಪ್ರಮುಖ ಆರೋಪಿ ಶಿವರಾಮ ಮಡಿವಾಳ ಪೊಲೀಸ್ ಕಸ್ಟಡಿಯಲ್ಲಿದ್ದು, ಉಳಿದವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News