ಪುತ್ತೂರು : ಭರವಸೆಯ ಗ್ರಾಮೀಣ ಯುವ ವೇಯ್ಟಾ ಲಿಫ್ಟರ್ ಸ್ವಸ್ತಿಕ್ ಶೆಟ್ಟಿ
ಪುತ್ತೂರು ತಾಲೂಕು ಕೌಕ್ರಾಡಿ ಗ್ರಾಮದ ದೋಂತಿಲ ಪೂವಪ್ಪ ಶೆಟ್ಟಿ ಮತ್ತು ಶಶಿಕಲಾ ಶೆಟ್ಟಿ ದಂಪತಿಗಳ ಸುಪುತ್ರ ರಾಷ್ಟ್ರೀಯ ಕ್ರೀಡಾಪಟು ಸ್ವಸ್ತಿಕ್ ಶೆಟ್ಟಿ ಅಪ್ಪಟ ಗ್ರಾಮೀಣ ಪ್ರತಿಭೆ. ಇದೀಗ ರಾಷ್ಟ್ರೀಯ ವೇಯ್ಟಾ ಲಿಫ್ಟರ್ ಆಗಿ ಮೂಡಿ ಬರುತ್ತಿದ್ದಾರೆ. ಗ್ರಾಮೀಣ ಪ್ರದೇಶ ಜೊತೆಗೆ ಬಡತನ ಇದ್ದರೂ ಅವಕಾಶ ಸಿಕ್ಕರೆ ಹೇಗೆ ಗ್ರಾಮೀಣ ಪ್ರತಿಭೆಗಳು ರಾಷ್ಟ್ರಮಟ್ಟದ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಸ್ವಸ್ತಿಕ್ ಶೆಟ್ಟಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮತ್ತು ಪ್ರೌಢಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಪಡುಬೆಟ್ಟುವಿನಲ್ಲಿ ಮುಗಿಸಿರುತ್ತಾರೆ. ನೆಲ್ಯಾಡಿಯ ಹೋಟೆಲ್ ಸುಬ್ರಹ್ಮಣ್ಯ ವಿಲಾಸದ ಮಾಲೀಕರಾದ ದಿ. ಸೂರ್ಯನಾರಾಯಣ ಆಚಾರ್ಯರು ಈತನ ಮನೆಯ ಆರ್ಥಿಕ ಪರಿಸ್ಥಿತಿ, ಕ್ರೀಡಾ ಆಸಕ್ತಿಯನ್ನು ಮನಗಂಡು ಈತನನ್ನು ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಕ್ರೀಡಾಕ್ಷೇತ್ರದ ಉಚಿತ ಶಿಕ್ಷಣಕ್ಕೆ ಸೇರಿಸಿದರು.
ಸಿಕ್ಕಿದ ಅವಕಾಶವನ್ನು ಸದುಪಯೋಗ ಮಾಡಿಕೊಂಡ ಸ್ವಸ್ತಿಕ್ ಶೆಟ್ಟಿ ಕಠಿಣ ತರಬೇತಿಯೊಂದಿಗೆ ಉತ್ತಮ ಕ್ರೀಡಾ ಸಾಧನೆಯನ್ನು ದಾಖಲಿಸಿಕೊಂಡು ಬಂದರು. ಹಲವು ಜಿಲ್ಲಾ ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡರು. ಉತ್ತಮ ಅಂಕದೊಂದಿಗೆ ಪಿಯುಸಿ ತೇರ್ಗಡೆ ಹೊಂದಿ ಆಳ್ವಾಸ್ ಕಾಲೇಜಿನಲ್ಲಿ ಬಿಕಾಂ ಪದವಿಗೆ ಸೇರಿಕೊಂಡರು.
ನವೆಂಬರ್ 2015ರಲ್ಲಿ ಮೂಡಬಿದ್ರೆಯಲ್ಲಿ ಜರುಗಿದ ರಾಜ್ಯ ಜೂನಿಯರ್ ವಿಭಾಗದಲ್ಲಿ ನೂತನ ದಾಖಲೆಯೊಂದಿಗೆ ಚಿನ್ನದ ಪದಕ ಜೊತೆಗೆ ಬೆಸ್ಟ್ ಲಿಫ್ಟರ್ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.
2015ರ ಸೀನಿಯರ್ ವಿಭಾಗದಲ್ಲೂ ಚಿನ್ನದ ಪದಕವನ್ನು ಪಡೆದು ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾದರು. ಮಂಗಳೂರು ವಿ.ವಿ. ಅಂತರ್ ಕಾಲೇಜು ಚಾಂಪಿಯನ್ ಶಿಪ್‌ನಲ್ಲಿ ಸತತ ಚಿನ್ನದ ಪದಕ ಪಡೆದ ಸ್ವಸ್ತಿಕ್ ಶೆಟ್ಟಿ ಜನವರಿಯಲ್ಲಿ ಆಂದ್ರಪ್ರದೇಶದ ಗುಂಟೂರಿನಲ್ಲಿ ಜರುಗಿದ ಅಖಿಲ ಭಾರತ ಅಂತರ್ ವಿ.ವಿ. ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ನಿರ್ವಹಣೆ ತೋರಿರುತ್ತಾರೆ.
ಮಾರ್ಚ್ ತಿಂಗಳಲ್ಲಿ ಬಿಹಾರದ ಪಾಟ್ನಾದಲ್ಲಿ ಜರುಗಿದ ರಾಷ್ಟ್ರೀಯ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ 5ನೇ ಸ್ಥಾನವನ್ನು ಪಡೆದರು. ಇದೀಗ ಆಳ್ವಾಸ್ ಕಾಲೇಜಿನಲ್ಲಿ ಉಚಿತ ಶಿಕ್ಷಣದಡಿಯಲ್ಲಿ ಅಂತಿಮ ಬಿಕಾಂ ಓದುತ್ತಿದ್ದು ವೇಯ್ಟಿಲಿಫ್ಟಿಂಗ್‌ನಲ್ಲಿ ಇನ್ನೂ ಹೆಚ್ಚಿನ ಸಾಧನೆಗಾಗಿ ಕಠಿಣ ತರಬೇತಿಯಲ್ಲಿದ್ದಾರೆ. ರಾಷ್ಟ್ರೀಯ ವೇಯ್ಟಾ ಲಿಫ್ಟಿಂಗ್ ತರಬೇತುದಾರರಾದ ಪ್ರಮೋದ್ ಕುಮಾರ್ ಶೆಟ್ಟಿ ನೆಲ್ಯಾಡಿ ಇವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.