×
Ad

ಉಡುಪಿ : ಜನಪ್ರೀತಿಯ ಕವಿ ಹೆಚ್.ಎಸ್.ವೆಂಕಟೇಶಮೂರ್ತಿ

Update: 2016-04-11 18:46 IST

      ನವ್ಯೋತ್ತರದ ಮುಖ್ಯ ಕವಿಗಳಲ್ಲಿ ಓರ್ವರಾದ ಹೆಚ್.ಎಸ್.ವೆಂಕಟೇಶಮೂರ್ತಿ ಅವರು ತಮ್ಮ ಕಾವ್ಯದಲ್ಲಿ ಗರಿಷ್ಠ ಪ್ರಮಾಣದ ನೆಲದ ನಿಷ್ಠೆಯನ್ನು ಬೆಳೆಸಿಕೊಂಡಿರುವುದ್ನು ನಾವು ಕಾಣಬಹುದಾಗಿದ್ದು ಇದರ ಜೊತೆಯಲ್ಲಿ ಅವರು ಸ್ವದೇಶೀಕರಣದ ಪ್ರಜ್ಞೆಯನ್ನೂ ಬೆಳೆಸಿಕೊಂಡು ಬಂದಿದ್ದಾರೆ ಎಂಬುದಾಗಿ ಪ್ರಸಿದ್ಧ ಕಥೆಗಾರ ಶ್ರೀ ರಾಘವೇಂದ್ರ ಪಾಟೀಲ  ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು. ಕಾಂತಾವರ ಕನ್ನಡ ಸಂಘದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಡಾ. ಹೆಚ್.ಎಸ್.ವೆಂಕಟೇಶಮೂರ್ತಿಯವರ ಕಾವ್ಯದ ಹೊಸ ಓದುಎಂಬ ಬಗ್ಗೆ ಮಾತನಾಡಿದರು.
          
   ಭಾರತೀಯ ನೆಲ, ಪರಿಸರ, ಅನುಭವಗಳೇ ಅವರ ಕಾವ್ಯಗಳಾಗಿ ರೂಪುಗೊಳ್ಳುವುದರಿಂದ ಅದರಲ್ಲಿ ವಿಶಿಷ್ಟವಾದ ಪ್ರಾದೇಶಿಕ ಪರಿಮಳವೂ ಬೆಸೆದುಕೊಂಡಿರುತ್ತದೆ. ಭಾರತೀಯ ಪುರಾಣದ ಕಥಾನಕಗಳನ್ನು ತನ್ನೊಡಲಿನಲ್ಲಿ ಧರಿಸಿಕೊಂಡೇ ಬರುವ ಅವರ ಅನುಭವಗಳು ಸಂಪೂರ್ಣ ಸ್ವದೇಶೀ ವಸ್ತುವಾಗಿಯೇ ಕಾವ್ಯದಂಗಳಕ್ಕೆ ಬಂದು ವಿಶಿಷ್ಟ ರೂಪು ತಳೆಯುತ್ತದೆ. ಇದರಿಂದಾಗಿಯೇ ಅವರು ಭಾರತೀಯ ಕಾವ್ಯ ಪರಂಪರೆಯನ್ನು ಅತ್ಯಂತ ಸಾರ್ಥಕವಾಗಿ ಬಳಸಿಕೊಂಡ ಜನಪ್ರೀತಿಯ ಕವಿ ಎಂಬುದಾಗಿ ಪ್ರಸಿದ್ಧರಾಗಿದ್ದಾರೆ ಎಂದರು. ಅತಿಥಿಗಳನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ. ಎಸ್.ಆರ್.ಅರುಣಕುಮಾರ್ ಅವರ ಉಡುಪಿ ಜಿಲ್ಲೆಯ ಸಿರಿ ಆಲಡೆಗಳುಅನ್ನುವ ಕೃತಿಯನ್ನು ಇದೇ ಸಂದರ್ಭದಲ್ಲಿ ಅತಿಥಿಗಳು ಲೋಕಾರ್ಪಣೆಗೊಳಿಸಿದರು. ಶ್ರೀ ಬಾಬು ಶೆಟ್ಟಿ ನಾರಾವಿಯವರು ಕಾರ್ಯಕ್ರಮ ನಿರ್ವಹಿಸಿದ್ದು ಡಾ.ನಾ.ಮೊಗಸಾಲೆಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಸದಾನಂದ ನಾರಾವಿಯವರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News