×
Ad

ಉಡುಪಿ : ಅತ್ಯಂತ ಉದ್ದದ ಸೆಲ್ಫಿ ಸ್ಟಿಕ್, ಅರ್ಮಾನ್‌ರಿಂದ ಗಿನ್ನೆಸ್ ದಾಖಲೆಗೆ ಯತ್ನ

Update: 2016-04-11 20:29 IST

ಉಡುಪಿ, ಎ.11: ಮಣಿಪಾಲ ಎಂಐಟಿಯ ಎಲೆಕ್ಟ್ರಿಕಲ್ ಆ್ಯಂಡ್ ಇಲೆ ಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಮೂರನೆ ವರ್ಷದ ಆರನೆ ಸೆಮಿಸ್ಟರ್ ವಿದ್ಯಾರ್ಥಿ ಮಂಗಳೂರು ಹಂಪನಕಟ್ಟೆಯ ಅರ್ಮಾನ್(20) ಅತ್ಯಂತ ಉದ್ದದ ಮೊಬೈಲ್ ಫೋನ್ ಸೆಲ್ಫಿ ಸ್ಟಿಕ್ ತಯಾರಿಸಿ ಬಳಸುವ ಮೂಲಕ ಗಿನ್ನೆಸ್ ದಾಖಲೆಗೆ ಯತ್ನಿಸಿದ್ದಾರೆ.
ಈವರೆಗಿನ ಗಿನ್ನೆಸ್ ದಾಖಲೆಯು ಅಮೆರಿಕಾದ ಹಾಲಿವುಡ್ ನಟ ಬೆನ್ ಸ್ಟಿಲ್ಲರ್ ಹೆಸರಿನಲ್ಲಿದ್ದು, ಇವರು 8.56 ಮೀಟರ್ ಉದ್ದದ ಸೆಲ್ಫಿ ಸ್ಟಿಕ್‌ನ್ನು ತಯಾರಿಸಿದ್ದರು. ಇದೀಗ ಅರ್ಮಾನ್ ಅದನ್ನು ಮೀರಿಸುವ 10.36 (ಮೊಬೈಲ್ ಸಹಿತ 10.39) ಮೀಟರ್ ಉದ್ದ ಸೆಲ್ಫಿ ಸ್ಟಿಕ್ ತಯಾರಿಸುವ ಮೂಲಕ ಗಿನ್ನೆಸ್ ದಾಖಲೆಯಲ್ಲಿ ಹೆಸರು ಪಡೆಯಲು ಹೊರಟಿದ್ದಾರೆ.
ಇಂದು ಮಣಿಪಾಲ ಎಂಐಟಿಯ 10ನೆ ಬ್ಲಾಕ್‌ನಲ್ಲಿರುವ ಮೈದಾನದಲ್ಲಿ ಗಿನ್ನೆಸ್ ದಾಖಲೆಯ ಪ್ರಯತ್ನವನ್ನು ನಡೆಸಿದ ಅರ್ಮಾನ್ 10.39 ಮೀ. ಉದ್ದದ ಸೆಲ್ಫಿ ಸ್ಟಿಕ್‌ನ್ನು ಪ್ರದರ್ಶಿಸಿದರು. ಉಡುಪಿ ಉಪವಿಭಾಗದ ಡಿವೈಎಸ್ಪಿ ಕುಮಾರಸ್ವಾಮಿ, ಎಂಐಟಿಯ ನಿರ್ದೇಶಕ ಡಾ.ಜಿ.ಕೆ.ಪ್ರಭು, ಜಂಟಿ ನಿರ್ದೇಶಕ ಡಾ.ಬಿ.ಎಚ್.ವಿ.ಪೈ, ಸ್ಟುಡೆಂಟ್ ವೆಲ್‌ಫೇರ್ ಅಸೋಸಿಯೇಟ್ ಡೈರೆಕ್ಟರ್ ಡಾ.ನಾರಾಯಣ ಶೆಣೈ, ಎಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ವಿಭಾಗದ ಪ್ರೊ.ಬಿ.ಕೆ.ಸಿಂಗ್, ಜಯಕರಶೆಟ್ಟಿ ಇಂದ್ರಾಳಿ ಇದಕ್ಕೆ ಸಾಕ್ಷಿ ಯಾದರು. ಎಂಐಟಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ನಾಗರಾಜ್ ಸ್ಟಿಕ್‌ನ ಸರ್ವೆ ನಡೆಸಿದರು.
  ಆರಂಭದಲ್ಲಿ ನಾನು ಸ್ಟೀಲ್ ಮೆಟಲ್‌ನಿಂದ ಸ್ಟಿಕ್ ಮಾಡಿದೆ. ಆದರೆ 10 ಮೀಟರ್ ಉದ್ದದ ಸ್ಟಿಕ್ ಮಾಡುವಾಗ ಅದು ಬಾಗಲು ಆರಂಭಿಸಿತು. ಅದಕ್ಕೆ ಅಲ್ಯುಮಿನಿಯಂ ಮೆಟಲ್ ಉಪಯೋಗಿಸಿದೆ. ಅದು ಹಗುರವಾಗಿ ರುವುದರಿಂದ ಯಶಸ್ವಿಯಾಯಿತು. ಈ ಸ್ಟಿಕ್‌ನ ಸುತ್ತಳತೆ ಅರ್ಧ, ಮುಕ್ಕಾಲು, 5/8 ಇಂಚು ಹೊಂದಿದೆ. ಈ ಸ್ಟಿಕ್‌ನ ಕೆಳಗಡೆ ಅಳವಡಿಸಿದ ಬಟನ್ ಪ್ರೆಸ್ ಮಾಡಿದರೆ 10ಮೀಟರ್ ಉದ್ದದ ಸ್ಟಿಕ್‌ನ ತುದಿಯಲ್ಲಿ ಅಳವಡಿಸಲಾದ ಮೊಬೈಲ್‌ನಲ್ಲಿ ಸೆಲ್ಫಿ ಫೋಟೋ ತೆಗೆಯಬಹುದಾಗಿದೆ ಎಂದು ಅರ್ಮಾನ್ ತಿಳಿಸಿದರು.
ಸಾಮಾನ್ಯವಾಗಿ 1.5ಮೀ. ಉದ್ದದ ಸ್ಟಿಕ್ ಬರುವುದು. ಆದರೆ ನನಗೆ ಇದರಲ್ಲಿ ಸಾಧನೆ ಮಾಡಬೇಕೆಂಬ ಮನಸ್ಸಾಯಿತು. ಇಂಟರ್‌ನೆಟ್ ಮೂಲಕ ಗಿನ್ನೆಸ್ ದಾಖಲೆ ಸಂಸ್ಥೆಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿದೆ. ಇದನ್ನು ಸ್ವೀಕರಿಸಿದ ಗಿನ್ನೆಸ್ ಸಂಸ್ಥೆಯವರು ಕೆಲವು ಕಾರ್ಯವಿಧಾನಗಳನ್ನು ನೀಡಿದರು. ಅದರಂತೆ ಸಾಕ್ಷಿಗಳ ಮುಂದೆ ಸ್ಟಿಕ್ ಪ್ರದರ್ಶಿಸಿ, ಸಂಪೂರ್ಣ ಚಿತ್ರೀಕರಣ ಮಾಡಲಾಗಿದೆ. ಮುಂದೆ ಛಾಯಾಚಿತ್ರ ಹಾಗೂ ವಿಡಿಯೋ ರೆಕಾರ್ಡ್‌ನ್ನು ಗಿನ್ನೆಸ್ ರೆಕಾರ್ಡ್ ಸಂಸ್ಥೆಗೆ ಕಳುಹಿಸಿಕೊಡಲಾಗುವುದು ಎಂದರು.
ಮಂಗಳೂರಿನ ಮುಹಮ್ಮದ್ ಸೂರಿಂಜೆ ಹಾಗೂ ರೆಹನಾ ದಂಪತಿಯ ಮೂವರು ಮಕ್ಕಳಲ್ಲಿ ಅರ್ಮಾನ್ ಹಿರಿಯ ಮಗ. ಉಳಿದಂತೆ ಅರ್ಮಾನ್ ಗೆ ಸಹೋದರ ಹಾಗೂ ಸಹೋದರಿ ಇದ್ದಾರೆ. ಮುಹ್ಮಮದ್ ಸೂರಿಂಜೆ ಕೂಡ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಮುಂಬೈಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆದಿರುವ ಇವರು ಇದೀಗ ಮಂಗಳೂರಿ ನಲ್ಲಿ ಸ್ವಂತ ವ್ಯವಹಾರ ನಡೆಸುತ್ತಿದ್ದಾರೆ.
ಎಂಐಟಿಯ ಫಾರ್ಮುಲಾ ಕಾರ್ ತಂಡದಲ್ಲಿಯೂ ಅರ್ಮಾನ್ ಇದ್ದಾರೆ. ಬ್ಲಾಗರ್, ಆ್ಯಂಡ್ರಾಯ್ಡಾ ಡೆವೆಲಪರ್, ಗ್ರಾಫಿಕ್ ಡಿಸೈನರ್ ಆಗಿರುವ ಇವರು ಮುಂದೆ ಅಟೋಮೊಬೈಲ್‌ನಲ್ಲಿ ಸಾಧನೆ ಮಾಡುವ ಗುರಿಯನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News