×
Ad

ಮಂಗಳೂರು : ಸುಡುಮದ್ದು ಪ್ರದರ್ಶನ: ಮುಂಜಾಗೃತಾ ಕ್ರಮಕ್ಕೆ ಡಿಸಿ ಸೂಚನೆ

Update: 2016-04-11 21:23 IST

 ಮಂಗಳೂರು, ಎ. 11: ಧಾರ್ಮಿಕ ಸಮಾರಂಭ, ಜಾತ್ರಾ ಮಹೋತ್ಸವ, ಮದುವೆ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಸುಡುಮದ್ದು ಪ್ರದರ್ಶನದ ಬಗ್ಗೆ ಪರವಾನಿಗೆ ಮಂಜೂರು ಮಾಡುವ ಕುರಿತು ಹಾಗೂ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯಿತು.

   ಈ ಜಿಲ್ಲೆಯಲ್ಲಿ ಮತ್ತು ಬೇರೆ ಜಿಲ್ಲೆಗಳಲ್ಲಿ ನಡೆದ ದುರ್ಘಟನೆಗಳನ್ನು ಆಧರಿಸಿ, ಈ ಸಭೆ ನಡೆಯಿತು. ಸಭೆಯಲ್ಲಿ ಪೊಲೀಸ್ ಆಯುಕ್ತರು, ಪೊಲೀಸ್ ಅಧೀಕ್ಷಕರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಸಹಿತ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಕೆಳಕಂಡ 7 ಅಧಿಕೃತ ಸುಡುಮದ್ದು ತಯಾರಿಕಾ ಘಟಕಗಳಿದ್ದು, ಸದ್ರಿ ಘಟಕಗಳ ವಿವರವನ್ನು ಮತ್ತು ಸದ್ರಿ ಘಟಕಗಳು ನಿಯಮಾನುಸಾರ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲನೆ ನಡೆಸಿ, ವರದಿ ನೀಡಲು ಜಿಲ್ಲೆಯ ಇಬ್ಬರು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಸದ್ರಿ ತಂಡದವರು ಭೇಟಿ ನೀಡಿ ಒಂದು ವಾರದಲ್ಲಿ ವರದಿ ನೀಡಲು ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸೂಚಿಸಿದರು.

 ಬಿ ಎಸ್. ಬಾಷಾ ಸಾಹೇಬ್ ಬಜಪೆ, ಗಂಗಾಧರ ಮೂಲ್ಯ ಕುಳಾಯಿ, ಶೇಕ್ ಮಹಮ್ಮದ್ ರಫೀಕ್, ನೆಕ್ಕಿಲಾರ್, ಜೋರ್ಜ್ ಡಿಸೋಜಾ, ಅಮ್ಟಾಡಿ, ಅಬ್ದುಲ್ ಶುಕೂರ್ ಕಂಬ್ಲಬೆಟ್ಟು, ಜಹಾಂಗೀರ್ ಬಾಷಾ, ಪಡುಪೆರಾರ್, ಸೈಯ್ಯದ್ ಬಶೀರ್ ವೇಣೂರು. ಈ ಅಧಿಕೃತ 7 ಸುಡುಮದ್ದು ತಯಾರಿಕಾ ಘಟಕಗಳ ವಿವರವನ್ನು ಸಾರ್ವಜನಿಕರಿಗೆ ಪ್ರಚುರ ಪಡಿಸಿ, ಈ 7 ಘಟಕಗಳಲ್ಲದೆ ಬೇರೆ ಅನಧಿಕೃತ ತಯಾರಿಕಾ ಘಟಕಗಳಿದ್ದಲ್ಲಿ, ಸಾರ್ವಜನಿಕರು ಅದರ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಪೊಲೀಸ್ ಆಯುಕ್ತರ ಕಚೇರಿಗೆ ಮತ್ತು ಪೊಲೀಸ್ ಅಧೀಕ್ಷಕರಿಗೆ ತಿಳಿಸಲು ಸಭೆಯಲ್ಲಿ ಕೋರಲಾಯಿತು. ಇಂತಹ ಅನಧಿಕೃತ ಘಟಕಗಳ ವಿರುದ್ಧ ಕಾನೂನಿನ ಕ್ರಮವನ್ನು ಜರಗಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News