ಕಾಸರಗೋಡು ಜಿಲ್ಲೆಯಲ್ಲಿ 30ಮಾದರಿ ಮತಗಟ್ಟೆಗಳ ಸಿದ್ಧತೆ: ಡಿಸಿ
ಕಾಸರಗೋಡು, ಎ.11: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ 30 ಮಾದರಿ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗುವುದು ಎಂದು ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಇ. ದೇವದಾಸನ್ ತಿಳಿಸಿದ್ದಾರೆ.
ಒಂದು ವಿಧಾನ ಸಭಾ ಕ್ಷೇತ್ರದಲ್ಲಿ ತಲಾ ಆರರಂತೆ ಮಾದರಿ ಮತಗಟ್ಟೆಗಳನ್ನು ಸಿದ್ಧತೆಗೊಳಿಸಲಾಗುವುದು. ಮಾದರಿ ಮತಗಟ್ಟೆಗಳಲ್ಲಿ ಮತದಾರರನ್ನು ಸ್ವಾಗತಿಸುವ ಫಲಕಗಳನ್ನು ಅಳವಡಿಸಲಾಗುವುದು. ಹೆಲ್ಪ್ ಡೆಸ್ಕ್ ಅಳವಡಿಸಲಾಗುವುದು. ಅಲ್ಲದೆ, 50 ಮತದಾರರಿಗೆ ಕುಳಿತು ಕೊಳ್ಳಲು ಕುರ್ಚಿಗಳು, ನೆರಳಿಗೆ ಚಪ್ಪರ ವ್ಯವಸ್ಥೆ ಮಾಡಲಾಗುವುದು. ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಲಾಗುವುದು. ಆರೋಗ್ಯ ಇಲಾಖೆಯಿಂದ ವೀಲ್‌ಚೆಯರ್, ರ್ಯಾಂಪ್, ಹೆಲ್ಪ್‌ಲೈನ್ ನಂಬ್ರ, ವೃದ್ಧರು ಮತ್ತು ಅಂಗವಿಕಲರಿಗೆ ವಿಶೇಷ ವಾಹನ ವ್ಯವಸ್ಥೆ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮತಗಟ್ಟೆಗಳಿಗೆ ನೇಮಿಸಿದ ಅಧಿಕಾರಿಗಳಿಗೆ ತರಬೇತಿ ನೀಡಲು ವಿಧಾನಸಭಾ ಕ್ಷೇತ್ರಗೊಳಪಟ್ಟ ಐವರು ಅಧಿಕಾರಿ ಮತ್ತು 35 ಸಿಬ್ಬಂದಿಗೆ ಎ.12 ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯ ಮಿನಿ ಸಭಾಂಗಣದಲ್ಲಿ ತರಬೇತಿ ಕಾರ್ಯಕ್ರಮ ನಡೆಯಲಿದೆ.