×
Ad

ಕೊಲ್ಲಂ ದುರಂತದ ಬಗ್ಗೆ ಈಗ ಶೋಕಿಸುವುದಕ್ಕಿಂತ ಆಗಲೇ ಪಂಕಜಾಕ್ಷಿ ಅಮ್ಮನ ಮಾತು ಕೇಳಬೇಕಿತ್ತು

Update: 2016-04-11 23:43 IST

ಕೊಲ್ಲಂ,ಎ.11: ಸಿಡಿಮದ್ದು ಪ್ರದರ್ಶನದ ವಿರುದ್ಧ ತನ್ನ ಹೋರಾಟವನ್ನು ಮುಂದುವರಿಸುವುದಾಗಿ ಮತ್ತು ಅದರ ಸಂಪೂರ್ಣ ನಿಷೇಧಕ್ಕಾಗಿ ಕಾನೂನು ಕ್ರಮಗಳಿಗೆ ಮೊರೆ ಹೋಗುವುದಾಗಿ 80ರ ವಯೋವೃದ್ಧೆ ಪಂಕಜಾಕ್ಷಿ ಅಮ್ಮಾ ಅವರು ಸೋಮವಾರ ಇಲ್ಲಿ ಹೇಳಿದರು. ಈ ಅಮ್ಮನ ದೂರಿನ ಅನ್ವಯವೇ ಕೊಲ್ಲಂ ಜಿಲ್ಲಾಧಿಕಾರಿಯವರು ಸಿಡಿಮದ್ದು ಪ್ರದರ್ಶನವನ್ನು ನಡೆಸಲು ಪುತ್ತಿಂಗಲ್ ದೇವಿ ದೇವಸ್ಥಾನದ ಅಧಿಕಾರಿಗಳಿಗೆ ಅನುಮತಿಯನ್ನು ನಿರಾಕರಿಸಿದ್ದರು.

ರವಿವಾರ ಬೆಳಿಗ್ಗೆ ಈ ದೇವಸ್ಥಾನದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 109 ಜನರು ಬಲಿಯಾಗಿದ್ದು, 380ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ದುರಂತ ನಡೆದ ಸ್ಥಳದಿಂದ ಕೇವಲ 50 ಮೀ.ದೂರದಲ್ಲಿರುವ ಪಂಕಜಾಕ್ಷಿ ಅಮ್ಮನ ಮನೆ ಅವಘಡದಿಂದಾಗಿ ತೀವ್ರ ಹಾನಿಗೊಳಗಾಗಿದೆ.

ಪ್ರತಿವರ್ಷ ಸಿಡಿಮದ್ದು ಪ್ರದರ್ಶನದ ಸಂದರ್ಭ ನಾವು ಮನೆಯಿಂದ ದೂರ ತೆರಳುತ್ತಿದ್ದೇವೆ. ಈ ವರ್ಷವೂ ನಾವು ಅಲ್ಲಿರಲಿಲ್ಲ, ನಮ್ಮದೇ ಆದ ಇನ್ನೊಂದು ಮನೆಗೆ ತೆರಳಿದ್ದೆವು ಎಂದು ಅಮ್ಮನ ಅಳಿಯ ಪ್ರಕಾಶ ಸುದ್ದಿಸಂಸ್ಥೆಗೆ ತಿಳಿಸಿದರು.

ನಾಲ್ಕು ವರ್ಷಗಳ ಹಿಂದೆ ಪಂಕಜಾಕ್ಷಿ ಅಮ್ಮ ಈ ಮನೆಯನ್ನು ಹೊಸದಾಗಿ ನಿರ್ಮಿಸಿದ್ದು, ಅಂದಿನಿಂದಲೂ ಸಿಡಿಮದ್ದು ಪ್ರದರ್ಶನವನ್ನು ನಿಲ್ಲಿಸುವಂತೆ ಅವರು ಮಾಡಿಕೊಂಡಿದ್ದ ಮನವಿಗಳನ್ನು ದೇವಸ್ಥಾನದ ಆಡಳಿತ ಕಡೆಗಣಿಸುತ್ತಲೇ ಬಂದಿತ್ತು.

ತನ್ನ ಪುತ್ರಿ ಮತ್ತು ಅಳಿಯನೊಡನೆ ವಾಸವಿರುವ ಪಂಕಜಾಕ್ಷಿ ಅಮ್ಮ ಈ ದುರಂತದಿಂದ ತೀವ್ರ ಆಘಾತಕ್ಕೊಳಗಾಗಿದ್ದಾರೆ.

ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿದಾಗ ದೇವಸ್ಥಾನದ ಅಧಿಕಾರಿಗಳು ತಮಗೆ ಬೆದರಿಕೆಯನ್ನೂ ಒಡ್ಡಿದ್ದರು ಎಂದು ಪ್ರಕಾಶ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News