×
Ad

ಶತಮಾನ ಕಂಡ ಶಾಲೆಯಲ್ಲೀಗ ವಾರ್ಷಿಕೋತ್ಸವ ಸಂಭ್ರಮ

Update: 2016-04-11 23:48 IST

ತಸ್ಲೀಂ ಮರ್ಧಾಳ 
ಕಡಬ, ಎ.11: 1900ರಲ್ಲಿ ಪ್ರಾರಂಭ ಗೊಂಡು ಪುತ್ತೂರು ತಾಲೂಕಿನಲ್ಲಿ ಶತಮಾನ ಕಂಡ ಕೆಲವೇ ಶಾಲೆಗಳಲ್ಲೊಂದಾಗಿರುವ ಬಂಟ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೀಗ ವಾರ್ಷಿಕೋತ್ಸವ ಸಂಭ್ರಮ. ಸುಮಾರು 117 ವರ್ಷಗಳ ಹಿಂದಿನಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದೇಗುಲವಾದ ಈ ಶಾಲೆಯಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ದೇಶ- ವಿದೇಶಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕ ರಿಸಿದ್ದಾರೆ. ಇತಿಹಾಸವನ್ನು ಹುಡುಕಿದರೆ ಈ ಶಾಲೆಯು ಮರ್ಧಾಳದಿಂದ ಒಂದೂವರೆ ಮೈಲು ದೂರದಲ್ಲಿನ ಪಾಲೆತ್ತಡ್ಕ ಎಂಬ ಪುಟ್ಟ ಊರಿನಲ್ಲಿ 1900ರಲ್ಲಿ ಪ್ರಾರಂಭವಾಗಿತ್ತಾದರೂ, ಹಲವು ಹಳ್ಳಿಗಳಿಗೆ ಕೇಂದ್ರ ಸ್ಥಳವಾದ ಮರ್ಧಾಳದ ಮೂಲಕ ಮಕ್ಕಳು ಅಲ್ಲಿಗೆ ಹೋಗುವ ಕಷ್ಟಗಳನ್ನು ನೋಡಿ 1921ರಲ್ಲಿ ದಿ.ತಿಮ್ಮಯ್ಯ ಕೊಂಡೆಯವರು ತನ್ನ ಸ್ವಂತ ಖರ್ಚಿನಲ್ಲಿ ಮರ್ದಾಳ ಬೀಡು ಎಂಬ ಮನೆಯಲ್ಲಿ ಶಾಲೆಯನ್ನು ಮುಂದುವರಿಸಿದರು. ಆ ಕಾಲದಲ್ಲಿ ಬಡತನದಿಂದಾಗಿ ಮಕ್ಕಳು ಶಾಲೆಗೆ ಬರುವುದಿಲ್ಲವೆಂದರಿತ ತಿಮ್ಮಯ್ಯ ಕೊಂಡೆಯವರು ಅದಕ್ಕಾಗಿ ಮಧ್ಯಾಹ್ನದ ಊಟ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದರು. ಬಳಿಕ ತನ್ನದೇ ಸ್ಥಳದಲ್ಲಿ ಶಾಲೆಗಾಗಿ ಖಾಯಂ ಕಟ್ಟಡವನ್ನು ಕಟ್ಟಿ ಕೆಲವು ಸಮಯದವರೆಗೆ ಶಾಲೆಯನ್ನು ನಡೆಸಿದರು. ಬಳಿಕ ದಿ.ಶೇಷಪ್ಪಆರಿಗ ಜೈನ್ ಎಂಬವರು ಶಾಲೆಯ ಜವಾಬ್ದಾರಿಯನ್ನು ವಹಿಸಿಕೊಂಡು 1960ರ ಸುಮಾರಿಗೆ ಜಿಲ್ಲಾ ಬೋರ್ಡ್‌ಗೆ ಬಿಟ್ಟುಕೊಟ್ಟರು. ಜಿಲ್ಲಾ ಬೋರ್ಡ್ ಕಟ್ಟಡ ಮತ್ತು ಸ್ಥಳದ ವೌಲ್ಯವೆಂದು ಆ ಕಾಲದ 6,000 ರೂ.ವನ್ನು ನೀಡುತ್ತೇವೆಂದು ತಿಳಿಸಿದರೂ, ಯಾವುದೇ ಹಣವನ್ನು ಪಡೆಯದೆ ಸ್ಥಳ ವನ್ನು ದಾನ ಮಾಡಿದರು. 1996ರಲ್ಲಿ ಈ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿದಾಗ ಹೊಸ ಕಟ್ಟಡಕ್ಕೆ ಎರಡನೆ ಬಾರಿಯೂ ಸ್ಥಳ ದಾನ ಮಾಡಿ ಗಮನ ಸೆಳೆದರು.
ಎ.14ರಂದು ಶಾಲಾ ವಾರ್ಷಿಕೋತ್ಸವ ನಡೆಯಲಿದ್ದು, ಅದಕ್ಕಾಗಿ ಶಾಲಾ ಕಟ್ಟಡಗಳನ್ನು ವಿವಿಧ ಇಲಾಖೆ ಹಾಗೂ ದಾನಿಗಳ ನೆರವಿನೊಂದಿಗೆ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ಸುಣ್ಣ-ಬಣ್ಣ ಬಳಿದು ಗೋಡೆಗಳ ಮೇಲೆ ವರ್ಲಿ ಚಿತ್ರಗಳ ಅಲಂಕಾರದೊಂದಿಗೆ ಸಕಲ ಸಿದ್ಧತೆಯನ್ನು ಮಾಡಲಾಗಿದೆ. ಯುವ ಉದ್ಯಮಿ ಶಿವ ಪ್ರಸಾದ್ ಕೈಕುರೆಯವರು ಸುಮಾರು 40,000 ವೆಚ್ಚದಲ್ಲಿ ದ್ವಾರವೊಂದನ್ನು ತನ್ನ ತಂದೆಯ ನೆನಪಿಗಾಗಿ ಕಟ್ಟಿಸಿದ್ದು, ಶಾಲೆಯ ಮೆರಗನ್ನು ಹೆಚ್ಚಿಸಿದೆ.

ಶಾಲೆಯಲ್ಲಿರುವ ಸೌಲಭ್ಯಗಳು: ಖಾಸಗಿ ಆಂಗ್ಲಮಾಧ್ಯಮ ಶಾಲೆಗಳಿಗೆ ತಾವೇನೂ ಕಮ್ಮಿಯಿಲ್ಲವೆಂಬಂತೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಮಕ್ಕಳಿಗಾಗಿ ಟೈಲರಿಂಗ್, ಕಂಪ್ಯೂಟರ್ ತರಬೇತಿ, ಕರಕುಶಲ ವಸ್ತುಗಳ ತಯಾರಿಕೆಯೊಂದಿಗೆ ಸ್ಕೌಟ್ಸ್, ಗೈಡ್ಸ್, ದಿನನಿತ್ಯ ವ್ಯಾಯಾಮ ಸೇರಿದಂತೆ ಸರಕಾರದಿಂದ ಕೊಡಮಾಡುವ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯಲ್ಲಿ ಬಿಸಿ ಹಾಲು, ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ವಿತರಿಸುವ ಮೂಲಕ ಅಧ್ಯಾಪಕ ವೃಂದವು ಶ್ರಮಿಸುತ್ತಿದೆ. 7 ಮಂದಿ ಶಿಕ್ಷಕರು ಹಾಗೂ 2 ಮಂದಿ ಸಹಾಯಕ ಶಿಕ್ಷಕರು ಮತ್ತು 3 ಮಂದಿ ಬೋಧಕೇತರ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಮಕ್ಕಳನ್ನು ಮಾದರಿ ವಿದ್ಯಾರ್ಥಿಗಳನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಯಲ್ಲಿ ಎಲ್‌ಕೆಜಿ ಪ್ರಾರಂಭಿಸುವ ಬಗ್ಗೆಯೂ ಯೋಚನೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News