×
Ad

ಭಾರತೀಯ ಮೂಗರ ಭಾಷೆಯ ಅಭಿವೃದ್ಧಿಗೆ ಕೇಂದ್ರ ಶೀಘ್ರವೇ ಸ್ಥಾಪನೆ: ಮೋದಿ

Update: 2016-04-11 23:49 IST

ಹೊಸದಿಲ್ಲಿ, ಎ.11: ಭಾರತೀಯ ಸಂಜ್ಞಾ ಭಾಷೆಯ ಅಭಿವೃದ್ಧಿಗಾಗಿ ಶೀಘ್ರವೇ ಕೇಂದ್ರವೊಂದನ್ನು ಸ್ಥಾಪಿಸಲು ಸರಕಾರವು ಅಂಗವಿಕರ ಸಬಲೀಕರಣ ಹಾಗೂ ಒಳಗೊಳಿಸುವಿಕೆಯನ್ನು ಸಾಧಿಸಲು ಸಂಪೂರ್ಣ ಬದ್ಧವಾಗಿದೆಯೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ಎ.11-13ರವರೆಗೆ ನಡೆಯುತ್ತಿರುವ ಅಂಗವಿಕಲರ ಅಂತಾರಾಷ್ಟ್ರೀಯ 9ನೆ ವಿಶ್ವ ಸಮ್ಮೇಳನದ ಪೂರ್ವದಲ್ಲಿ ನೀಡಿರುವ ಸಂದೇಶವೊಂದರಲ್ಲಿ ಅವರು, ತನ್ನ ಸರಕಾರವು ಅಂಗವಿಕಲರ ವ್ಯಕ್ತಿಗಳ ಹಕ್ಕುಗಳ ಕುರಿತಾದ ವಿಶ್ವಸಂಸ್ಥೆಯ ಸನದಿಗೆ ಹಾಗೂ ಅವರ ಸಬಲೀಕರಣ ಹಾಗೂ ಒಳಗೊಳಿಸುವಿಕೆಯನ್ನು ಸಾಧಿಸಲು ಸಂಪೂರ್ಣ ಬದ್ಧವಾಗಿದೆ ಎಂದಿದ್ದಾರೆ.

ವಿಶ್ವಬ್ಯಾಂಕ್‌ನ ಅಂದಾಜಿನಂತೆ, ಕಾರ್ಮಿಕ ಶಕ್ತಿಯಿಂದ ಅಂಗವಿಕಲರನ್ನು ಹೊರಗಿಡುವ ವೆಚ್ಚವು ಜಿಡಿಪಿಯ ಶೇ.3 ರಿಂದ 7ರಷ್ಟಿದೆ. ‘ಅಕ್ಸೆಸಿಬಿಲಿಟಿ ಇಂಡಿಯಾ’ ಅಭಿಯಾನದಂತಹ ಕಾರ್ಯಕ್ರಮಗಳು ಅಂಗವಿಕಲರನ್ನು ಒಳಗೊಳಿಸಿಕೊಳ್ಳುವಂತಹ ವಾತಾವರಣ ನಿರ್ಮಾಣದ ಗುರಿ ಹೊಂದಿದೆಯೆಂದು ಪ್ರಧಾನಿ ಹೇಳಿದ್ದಾರೆ.

ತಾವು ಭಾರತೀಯ ರೈಲ್ವೆಯನ್ನೂ ಪ್ರವೇಶಸಾಧ್ಯವಾಗಿಸುತ್ತೇವೆ ಹಾಗೂ ಭಾರತೀಯ ಸಂಜ್ಞಾ ಭಾಷೆಯ ಅಭಿವೃದ್ಧಿಗೆ ಕೇಂದ್ರವೊಂದನ್ನು ಸ್ಥಾಪಿಸುತ್ತಿದ್ದೇವೆಂದು ಅವರು ತಿಳಿಸಿದ್ದಾರೆ.

ವಿಶ್ವಸಂಸ್ಥೆ ಹಾಗೂ ಜಿ3 ಐಸಿಟಿಗಳ ಬೆಂಬಲದಿಂದ ನಡೆಯಲಿರುವ ಸಮ್ಮೇಳನದ ಸರ್ವ ಸದಸ್ಯರ ಸಭೆಯನ್ನುದ್ದೇಶಿಸಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್‌ಚಂದ್ ಗೆಹ್ಲೊಟ್ ಭಾಷಣ ಮಾಡಲಿದ್ದಾರೆ.

ಜಿ3 ಐಸಿಟಿ ಅಥವಾ ಒಳಗೊಂಡ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಜಾಗತಿಕ ಕಾರ್ಯಕ್ರಮವು,ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯಲ್ಲಿ ಅಂಗವಿಕಲರ ಹಕ್ಕುಗಳ ಸನದು ಕಾರ್ಯಾಲಯದ ಸಹಕಾರದೊಂದಿಗೆ ಐಸಿಟಿ ಹಾಗೂ ಅಭಿವೃದ್ಧಿಗಾಗಿ ವಿಶ್ವಸಂಸ್ಥೆಯ ಜಾಗತಿಕ ಮೈತ್ರಿಕೂಟವು 2006ರಲ್ಲಿ ಉದ್ಘಾಟಿಸಿರುವ ಸಮರ್ಥನಾ ಕಾರ್ಯಕ್ರಮವಾಗಿದೆ.

2016ರ ಮಾರ್ಚ್‌ನಲ್ಲಿ, ಅಂಗವಿಕಲ ವ್ಯಕ್ತಿಗಳ ಕುರಿತು ಸಂಘಟನೆಗಳ ಕಾರ್ಯಾಚರಣೆ ಹಾಗೂ ನಡವಳಿಕೆಗಳನ್ನು ಅಳೆಯುವ, ಸರಕಾರದ ‘ಒಳಗೊಳಿಸುವಿಕೆ ಹಾಗೂ ಪ್ರವೇಶಾವಕಾಶ ಸೂಚಿ’, ಅವರಿಗೆ ಕಟ್ಟಡಗಳು ಹಾಗೂ ಕೆಲಸದ ಸ್ಥಳ, ಸಾರ್ವಜನಿಕ ಸಾರಿಗೆ ಇತ್ಯಾದಿಗಳ ಸುಲಭ ಪ್ರವೇಶವನ್ನು ಸಾಧ್ಯವಾಗಿಸಬೇಕೆಂದು ಕರೆ ನೀಡಿತ್ತು.

ಸಾರ್ವಜನಿಕ ಹಾಗೂ ಖಾಸಗಿ ವಲಯಗಳೆರಡರ ನಿರ್ಮಾಣಗಳಲ್ಲೂ ಸುಲಭ ಪ್ರವೇಶ ವ್ಯವಸ್ಥೆಯನ್ನು ನಿರ್ಮಿಸಬೇಕು. ಇಲ್ಲದಿದ್ದಲ್ಲಿ ಅಂಗವಿಕಲರ ಉದ್ಯೋಗ ಬಿಡಿ, ವಿದ್ಯಾಭ್ಯಾಸವನ್ನು ಮಾಡುವುದೂ ಸಾಧ್ಯವಾಗದೆಂದು 150ಕ್ಕೂ ಹೆಚ್ಚು ದೇಶಗಳ ಸದಸ್ಯರಿರುವ ಡಿಪಿಐಯ ಅಧ್ಯಕ್ಷ ಜಾವೇದ್ ಅಬಿದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News