ಪುತ್ತೂರು: ವಿದ್ಯಾರ್ಥಿ ಸಂಘಟನೆಯಿಂದ ಜಲ ಜಾಗೃತಿ ಅಭಿಯಾನ
ಪುತ್ತೂರು: ನೀರಿನಿಂದಲೇ ಜಗತ್ತಿನ ಸೃಷ್ಠಿಯಾಗಿದ್ದು, ಪವಿತ್ರ ಕುರ್‌ಆನ್‌ನಲ್ಲಿ ನೀರಿನ ಬಗ್ಗೆ 63 ಬಾರಿ ಉಲ್ಲೇಖಿಸಲಾಗಿದೆ. ತುಂಬಿ ಹರಿಯುವ ನೀರಿನಲ್ಲಿ ಸ್ನಾನ ಮಾಡುತ್ತಿದ್ದರೂ ನೀರನ್ನು ಪೋಲು ಮಾಡಂತೆ ಸೃಷ್ಠಿಕರ್ತನು ಆಜ್ಞೆ ಮಾಡಿದ್ದಾನೆ ಎಂದು ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಎಸ್. ಬಿ ಮುಹಮ್ಮದ್ ದಾರಿಮಿ ಹೇಳಿದರು. ಅವರು ಮದ್ರಸ ವಿದ್ಯಾರ್ಥಿ ಸಂಘಟನೆಯಾದ ಎಸ್‌ಕೆ ಎಸ್‌ಬಿವಿ ವತಿಯಿಂದ ಮಂಗಳವಾರ ನಡೆದ ಜಲಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಇಸ್ಲಾಂ ಎಂಬುದು ಪೃಕೃತಿಯ ಧರ್ಮವಾಗಿದ್ದು, ಕುರ್‌ಆನ್‌ನಲ್ಲಿ ನೀರು, ಸೂರ್ಯ, ಚಂದ್ರನ ಬಗ್ಗೆ ಹೆಚ್ಚು ಉಲ್ಲೇಖವಿದೆ. ನೀರಿನ ಬಗ್ಗೆ 63 ಬಾರಿ ಉಲ್ಲೇಖಿಸಲಾಗಿದ್ದು, ಇದು ಓರ್ವ ಮನುಷ್ಯನ ಸರಾಸರಿ ಆಯುಷ್ಯವನ್ನು ಸೂಚಿಸುವಂತಿದ್ದು, ಬದುಕಿನುದ್ದಕ್ಕೂ ನೀರಿನ ಅಗತ್ಯತೆಯ ಎಚ್ಚರಿಕೆಯಾಗಿದೆ. ಸೂರ್ಯನ ಬಗ್ಗೆ 33 ಬಾರಿ ಹಾಗೂ ಚಂದ್ರನ ಬಗ್ಗೆ 27 ಬಾರಿ ಕುರ್‌ಆನ್‌ನಲ್ಲಿ ಉಲ್ಲೇಖಿಸಲಾಗಿದೆ. ನೀರನ್ನು ಉಳಿಸುವ ಬಗ್ಗೆ ಅಲ್ಲಾಹನ ಆದೇಶವಿದ್ದು ಇಲ್ಲಿನ ನೀರಿನ ಮೇಲೆ ಪ್ರತಿ ಜೀವಿಗಳಿಗೂ ಹಕ್ಕಿದೆ. ಆದರೆ ಸ್ವಾರ್ಥಕ್ಕೋಸ್ಥರ ನೀರನ್ನು ಕಸಿಯುತ್ತಿರುವುದು ದುರಂತ. ಮಿತಬಳಕೆಯ ಮೂಲಕ ಮುಂದಿನ ಪೀಳಿಗೆಗೆ ನೀರನ್ನು ಉಳಿಸುವ ಕೆಲಸವಾಗಬೇಕು ಎಂದರು. ಮೇ.25ರ ತನಕ ಮದ್ರಸ ವಿದ್ಯಾರ್ಥಿ ಸಂಘಟನೆಯಾದ ಎಸ್‌ಕೆ ಎಸ್‌ಬಿವಿ ವತಿಯಿಂದ ಜಲಜಾಗೃತಿ ಅಭಿಯಾನ ನಡೆಯಲಿದೆ. ನೀರಿನ ಮಹತ್ವವನ್ನು ಸಾರುವ ಬ್ಯಾನರನ್ನು ಮೊಹಲ್ಲಾದ ಮಸೀದಿಗಳಲ್ಲಿ ಅಳವಡಿಸಲಾಗಿದ್ದು ಪ್ರತೀ ಮನೆ ಮನೆಗೂ ಈ ಕುರಿತು ಮಾಹಿತಿ ನೀಡಲಾಗುತ್ತಿದೆ.