ಹೈದರಾಬಾದ್‌ನಲ್ಲಿ ಇಬ್ಬರು ಹೆಮ್ಮಕ್ಕಳನ್ನು ಮಾರಲು ಯತ್ನಿಸಿದ ತಂದೆ!
ಹೊಸದಿಲ್ಲಿ, ಎಪ್ರಿಲ್.12: ಯಾವನೆ ತಂದೆ ತನ್ನ ಹಾಲುಣ್ಣುವ ಶಿಶುವನ್ನು ಮಾರಲು ಸಿದ್ಧನಾದಾನೇ? ಆದರೆ, ಬಡತಂದೆಯೊಬ್ಬ ಬಡತನದಿಂದ ಕಂಗಾಲಾಗಿ ತನ್ನಿಬ್ಬರು ಮಕ್ಕಳನ್ನು ಮಾರಲು ಹೊರಟ ಘಟನೆ ಹೈದರಾಬಾದ್‌ನಿಂದ ವರದಿಯಾಗಿದೆ. ಆರುವರ್ಷದ ಬಾಲಕಿ ಮತ್ತು ನಾಲ್ಕು ತಿಂಗಳ ಹೆಣ್ಮಗುವನ್ನು ಮಾರಲು ಆತ ಪೇಟೆಗೆ ಬಂದಿದ್ದ . ಮಕ್ಕಳತಾಯಿ ಕೆಲಸಕ್ಕೆ ಹೊರಟು ಹೋದ ಸಂದರ್ಭದಲ್ಲಿ. ಇಬ್ಬರು ಮುಗ್ಧ ಮಕ್ಕಳಿಗೆ ಇಪ್ಪತ್ತು ಸಾವಿರ ರೂಪಾಯಿ ನಿಗದಿಗೊಳಿಸಿ ಮಾರಲು ಅವರಿವರಲ್ಲಿ ವಿಚಾರಿಸತೊಡಗಿದ್ದನೆನ್ನಲಾಗಿದ್ದು. ಯಾರೂ ಖರೀದಿಗೆ ಮುಂದೆ ಬಾರದ್ದರಿಂದ ಅಲ್ಲಿಗೆ ಬಂದ ಪೊಲೀಸರಲ್ಲಿಯೂ ಮಕ್ಕಳನ್ನು ಖರೀದಿಸಿ ಎಂದು ದುಂಬಾಲು ಬಿದ್ದನೆಂದು ವರದಿಗಳು ತಿಳಿಸಿವೆ. ಈ ಹೃದಯ ವಿದ್ರಾವಕ ಘಟನೆ ಹೈದರಾಬಾದ್‌ನ ಮೆಹಬೂಬ್ ನಗರದಲ್ಲಿ ನಡೆದಿದೆ. ಡೆಕ್ಕನ್‌ಕ್ರಾನಿಕಲ್ ವರದಿ ಪ್ರಕಾರ ಬಿಜ್ನಾಪಲ್ಲಿ ವ್ಯಾಪ್ತಿಯ ಲಟ್ಟೂಪಲ್ಲಿ ಗ್ರಾಮದ ಮಲ್ಲೇಶ ಮತ್ತು ಪತ್ನಿ ನರಸಮ್ಮ ತುಂಬ ಬಡವ ದಂಪತಿಗಳು. ಇಬ್ಬರಿಗೂ ಏಳು ವರ್ಷ ಮೊದಲು ವಿವಾಹವಾಗಿತ್ತು. ಇವರಿಗೆ ಇಬ್ಬರು ಹೆಣ್ಮಕ್ಕಳಿದ್ದು ಅರುವರ್ಷ ಮತ್ತು ಇನ್ನೊಂದು ನಾಲ್ಕು ತಿಂಗಳ ಶಿಶು. ಗೀತಾಂಜಲಿ ಮತ್ತು ಭೂಲಕ್ಷ್ಮೀಯನ್ನು ಬಡತನ ಕಾರಣದಿಂದಾಗಿ ಪತ್ನಿಯೊಂದಿಗೆ ಜಗಳವಾದ ನಂತರ ಮಾರಲು ತಂದಿದ್ದ ಎಂದು ವರದಿಗಳು ತಿಳಿಸಿವೆ. ಅವರಿಬ್ಬರ ನಡುವೆ ಜಗಳದ ನಂತರ ಪತಿ ಪತ್ನಿಯರ ನಡುವೆ ಮಾತುಕತೆ ಕೂಡ ಇರಲಿಲ್ಲ. ಮಲ್ಲೇಶ ತನ್ನ ಪತ್ನಿ ನರಸಮ್ಮರಿಂದ ತುಂಬ ಕೋಪಗೊಂಡಿದ್ದ ಎನ್ನಲಾಗಿದ್ದು ಮಕ್ಕಳನ್ನು ಮಾರಿ ಹಣ ಸಂಪಾದಿಸುವ ನಿರ್ಧಾರಕ್ಕೆ ಬಂದನೆನ್ನಲಾಗಿದೆ. ಸೋಮವಾರ ನರಸಮ್ಮ ಕೆಲಸಕ್ಕೆ ಹೋದಾಗ ಮಲ್ಲೇಶ ಮಕ್ಕಳನ್ನು ಕರೆದುಕೊಂಡು ಮೆಹಬೂಬ್ ನಗರಕ್ಕೆ ಬಂದು ಜಿಲ್ಲಾ ಶಿಕ್ಷಣ ಕಾರ್ಯಾಲಯದ ಬಳಿ ಕುಳಿತು ಇಪ್ಪತ್ತು ಸಾವಿರ ರೂಪಾಯಿಗೆ ಮಕ್ಕಳನ್ನು ಮಾರುತ್ತೇನೆ ಎಂದು ಹೇಳತೊಡಗಿದ್ದ. ಅಲ್ಲಿ ನಡೆದಾಡುತ್ತಿದ ಯಾರೋ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಪೊಲೀಸರು ಅಲ್ಲಿಗೆ ಬಂದಾಗ ಅವರೊಡನೆ ಮಲ್ಲೇಶ ಇಪ್ಪತ್ತು ಸಾವಿರ ರೂಪಾಯಿಗೆ ಮಕ್ಕಳನ್ನು ತನ್ನ ಖರೀದಿಸಿ ಮಹದುಪಕಾರ ಮಾಡಿ ಎಂದು ಅಲವತ್ತುಕೊಳ್ಳತೊಡಗಿದ್ದ. ಮಕ್ಕಳನ್ನು ಶಿಶು ವಿಹಾರಕ್ಕೆ ಕಳುಹಿಸಿದ ಪೊಲೀಸರು ಮಲ್ಲೇಶನನ್ನು ಜೊತೆಗೆ ಕರೆದೊಯ್ದರು ಎಂದು ವರದಿಗಳು ತಿಳಿಸಿವೆ.