ಪುತ್ತೂರು: ಎ.17-22: ಹಾರ್ಪಳ ಶಾಸ್ತಾರೇಶ್ವರ ದೇವಳ ನವೀಕರಣ, ಬ್ರಹ್ಮಕಲಶ
ಪುತ್ತೂರು: ಪುತ್ತೂರು ತಾಲೂಕಿನ ನೆಲ್ಯಾಡಿಯ ಕುತ್ರಾಡಿ ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶ ಮಹೋತ್ಸವ ಎ.17ರಿಂದ 22ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ತಿಳಿಸಿದ್ದಾರೆ. ಅವರು ಮಂಗಳವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದರು. ಎ. 17ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಹೊರೆಕಾಣಿಕೆ ಮೆರವಣಿಗೆ, ಮಹಾಪೂಜೆ ನಡೆಯಲಿದೆ. ಸಂಜೆ ತಂತ್ರಿ ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ, ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಬಳಿಕ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಎ.18, 19, 20, 21ರಂದು ಬೆಳಗ್ಗಿನಿಂದ ಸಂಜೆಯ ತನಕ ಧಾರ್ಮಿಕ ಕಾರ್ಯಕ್ರಮ, ಹೊರೆಕಾಣಿಕೆ ಸಮರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. . ಎ.22ರಂದು ಬೆಳಿಗ್ಗೆ ವೃಷಭ ಲಗ್ನ ಮುಹೂರ್ತದಲ್ಲಿ ದೇವರ ಪ್ರತಿಷ್ಠೆ, ಮಧ್ಯಾಹ್ನ ಬ್ರಹ್ಮಕಲಶಾಭಿಷೇಕ ಜರುಗಲಿದೆ. ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ ಹಾಗೂ ಭಜನೆ ನಡೆಯಲಿದೆ. ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಧರ್ಮ ಮತ್ತು ಸಂಸ್ಕೃತಿ ವಿಷಯದಲ್ಲಿ ಪುತ್ತೂರು ಯುವ ಬ್ರಿಗೇಡ್ ವಕ್ತಾರ ಶ್ರೀಕೃಷ್ಣ ಉಪಾಧ್ಯಾಯ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಚಿವರಾದ ರಮಾನಾಥ ರೈ, ವಿನಯಕುಮಾರ್ ಸೊರಕೆ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಶಾಸಕರಾದ ಶಕುಂತಳಾ ಶೆಟ್ಟಿ, ಅಂಗಾರ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಕೆ.ಎಸ್, ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಗೌಡ, ಕೋಶಾಧಿಕಾರಿ ವೆಂಕಟ್ರಮಣ ಉಪಸ್ಥಿತರಿದ್ದರು.