×
Ad

ಪಿಲಿಕುಳದ ಗುತ್ತಿನ ಮನೆಯಲ್ಲಿ ಜಾನಪದ ಲೋಕ : ಎ. 15ರಿಂದ ಸಾರ್ವಜನಿಕ ವೀಕ್ಷಣೆಗೆ ಅವಕಾಶ

Update: 2016-04-12 18:15 IST

ಮಂಗಳೂರು, ಎ. 12: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಗುತ್ತಿನಮನೆ ಇದೀಗ ಜಾನಪದ ಲೋಕವಾಗಿ ಪರಿವರ್ತನೆಗೊಳ್ಳುತ್ತಿದೆ. ಈಗಿರುವ ಗುತ್ತಿನ ಮನೆ ತುಳುನಾಡಿನ ವೈಭವೊಂದಿಗೆ ಹೊಸ ರೂಪ, ಹೊಸ ಆಕರ್ಷಣೆಯೊಂದಿಗೆ ಪ್ರವಾಸಿಗರನ್ನು ಸೆಳೆಯಲು ಸಿದ್ಧಗೊಳ್ಳುತ್ತಿದೆ.

ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 498 ಲಕ್ಷ ರೂ. ವೆಚ್ಚದಲ್ಲಿ ಪಿಲಿಕುಳದಲ್ಲಿ ಜಾನಪದ ಲೋಕ ಯೋಜನೆಗೆ ಮುಂದಾಗಿದ್ದು, ‘ತುಳು ಸಂಸ್ಕೃತಿ ಗ್ರಾಮ’ ಯೋಜನೆಯಡಿ ಪ್ರಥಮ ಹಂತವಾಗಿ ಗುತ್ತಿನ ಮನೆ ಒಳಾಂಗಣ ವಸ್ತು ಸಂಗ್ರಹಾಲಯವನ್ನು ರೂಪಿಸಲಾಗಿದ್ದು, ಎಪ್ರಿಲ್ 15ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ. ಗುತ್ತಿನ ಮನೆ ವಸ್ತು ಸಂಗ್ರಹಾಲಯಕ್ಕೆ ಹಿರಿಯರಿಗೆ 30 ರೂ. ಪ್ರವೇಶ ಶುಲ್ಕ. ಕಿರಿಯರಿಗೆ 20 ರೂ. ಶುಲ್ಕ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಜಾನಪದ ಲೋಕಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 498 ಲಕ್ಷ ರೂ. ಮಂಜೂರಾಗಿದ್ದು, 2015-16ನೇ ಸಾಲಿಗೆ 149ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ಒಳಾಂಗಣ ವಸ್ತು ಸಂಗ್ರಹಾಲಯವನ್ನು ತುಳುನಾಡಿನ ಪರಂಪರೆ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ ರೂಪಿಸಲಾಗಿದೆ. ಅದರಲ್ಲಿ ಈಗಾಗಲೇ ತುಳುನಾಡಿನ ವೈಭವವನ್ನು ಸಾರುವ ಯಕ್ಷಗಾನದ ಚೌಕಿಯ ವೇಷ ಭೂಷಣ, ಬಣ್ಣ ಹಚ್ಚುವ ಸನ್ನಿವೇಶದ ಸ್ತಬ್ಧಚಿತ್ರಗಳನ್ನು ರೂಪಿಸಲಾಗಿದೆ. ತುಳುನಾಡಿನ ವೀರರೆಂದೇ ಕರೆಯಲ್ಪಡುವ ಕೋಟಿ ಚೆನ್ನಯರು, ಅಜ್ಜಿ ಹೇಳುವ ಕಥೆಯನ್ನು ಮೊಮ್ಮಕ್ಕಳು ಕೇಳುತ್ತಿರುವ ಸ್ತಬ್ಧಚಿತ್ರಗಳು, ಮೇನೆ, ಗೊರಬು, ಗುತ್ತಿನ ಮನೆಯ ಯಜಮಾನನ ಹಾಸಿಗೆ (ಮಂಚ), ಗೊರಬು, ಅಡುಗೆ ಮನೆಯ ಚಿತ್ರಣ, ದೇವರ ಕೋಣೆ ಮೊದಲಾದವುಗಳು ಗುತ್ತಿನ ಮನೆಯ ಆಕರ್ಷಣೆಯನ್ನು ಹೆಚ್ಚಿಸಿವೆ. ಗುತ್ತಿನ ಮನೆಯನ್ನು ಸಂಪೂರ್ಣ ತುಳುನಾಡಿನ ವಸ್ತುಸಂಗ್ರಹಾಲಯವಾಗಿ ರೂಪಿಸುವ ಪ್ರಕ್ರಿಯೆ ಸದ್ಯ ಹಂತಹಂತವಾಗಿ ನಡೆಯುತ್ತಿದೆ.

ಜಾನಪದ ಲೋಕ ಯೋಜನೆಯ ಮುಂದಿನ ಹಂತವಾಗಿ ಹೊರಾಂಗಣ ವಸ್ತು ಸಂಗ್ರಹಾಲಯ, ಕರಾವಳಿ ಜನಪದ ಸ್ತು ಸಂಗ್ರಹಾಲಯ, ಮೂರು ಕುಟೀರಗಳ ನಿರ್ಮಾಣ, ರಸ್ತೆ, ನೀರು, ಶೌಚಾಲಯ ಹಾಗೂ ವಾಹನ ನಿಲುಗಡೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಮ್ಮ ಕಚೇರಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ತುಳು ಸಂಸ್ಕೃತಿ ಗ್ರಾಮ ಒಂದು ಭಿನ್ನವಾದ ಪ್ರಯತ್ನ. ಇಲ್ಲಿ ಸಂಸ್ಕೃತಿ ರಕ್ಷಣೆಯ ಜತೆಗೆ ಕಲಿಕೆಗೂ ಅವಕಾಶವಿದೆ. ಕೆಲವೊಂದು ಸಂಗತಿಗಳನ್ನು ಸ್ವಯಂ ಆಗಿ ಅನುಭವಿಸುವುದಕ್ಕೆ ಪೂರಕವಾಗಿ ಗುತ್ತಿನ ಮನೆಯೊಳಗೆ ವಸ್ತುಗಳನ್ನು ಜೋಡಿಸಲಾಗಿದೆ ಎಂದು ತುಳು ಸಂಸ್ಕೃತಿ ಗ್ರಾಮ ಯೋಜನೆಯ ಉಪ ಸಮಿತಿ ಅಧ್ಯಕ್ಷ ಪ್ರೊ.ಬಿ.ಎ.ವಿವೇಕ ರೈ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಪಿಲಿಕುಳ ನಿಸರ್ಗಧಾಮದ ಕಾರ್ಯ ನಿರ್ವಾಹಕ ನಿರ್ದೇಶಕ ಎಸ್.ಎ.ಪ್ರಭಾಕರ ಶರ್ಮ, ಎನ್.ಜಿ.ಮೋಹನ್, ಕಲಾವಿದ ಶಶಿಧರ ಅಡಪ, ಅಂಚೆ ಇಲಾಖೆಯ ಹಿರಿಯ ಅಂಚೆ ಅಧೀೀಕ್ಷಕ ಜಗದೀಶ ಪೈ ಉಪಸ್ಥಿತರಿದ್ದರು.

14ರಂದು ಬಿಸು ಆಚರಣೆ

ಪ್ರತಿ ವರ್ಷದಂತೆ ಈ ವರ್ಷವೂ ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಗುತ್ತಿನ ಮನೆಯಲ್ಲಿ ಬಿಸು ಆಚರಣೆ ನಡೆಯಲಿದೆ. ಎ. 14ರಂದು ಬೆಳಗ್ಗೆ 10 ಗಂಟೆಗೆ ಬಿಸು ಕಣಿ ಇಡುವುದರೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಬೆಳಗ್ಗೆ 10-30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದರು.

ಅಂದು ಗುತ್ತಿನ ಮನೆ ಒಳಾಂಗಣ ಗುತ್ತಿನ ಮನೆ ವೀಕ್ಷಿಸಬಹುದಾಗಿದೆ. ಎ.13ರಂದು ಅಪರಾಹ್ನ ಪಿಲಿಕುಳ ನಿಸರ್ಗಧಾಮಕ್ಕೆ 20 ವರ್ಷ ಸಂದ ನೆನಪಿಗಾಗಿ ಅಂಚೆ ಇಲಾಖೆ ವಿಶೇಷ ಅಂಚೆ ಲಕೋಟೆಯನ್ನು ಹೊರ ತರುತ್ತಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂದು ಸಂಜೆ 3 ಗಂಟೆಗೆ ಈ ಕಾರ್ಯಕ್ರಮ ಜರುಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News