ರಜನಿಕಾಂತ್,ಸಾನಿಯಾ ಸೇರಿದಂತೆ 56 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ
ಹೊಸದಿಲ್ಲಿ,ಎ.12: ಸೂಪರ್‌ಸ್ಟಾರ್ ರಜನಿಕಾಂತ್,ಟೆನಿಸ್ ತಾರೆ ಸಾನಿಯಾ ಮಿರ್ಝಾ,ಮಾಜಿ ಅಮೆರಿಕದ ರಾಯಭಾರಿ ರಾಬರ್ಟ್ ಡಿ.ಬ್ಲಾಕ್‌ವಿಲ್ ಮತ್ತು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸೇರಿದಂತೆ 56 ಗಣ್ಯರಿಗೆ ಮಂಗಳವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪದ್ಮ ಪ್ರಶಸ್ತಿಗಳನ್ನು ಪ್ರದಾನಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಡಿಆರ್‌ಡಿಒ ಮುಖ್ಯಸ್ಥ ವಿ.ಕೆ.ಅತ್ರೆ, ‘ಈನಾಡು’ ತೆಲುಗು ದೈನಿಕದ ಮುಖ್ಯ ಸಂಪಾದಕ ರಾಮೋಜಿ ರಾವ್,ಮಾನವತಾವಾದಿ ಹಾಗೂ ಶಿಕ್ಷಣತಜ್ಞೆ ಇಂದು ಜೈನ್,ಮಾರುತಿ ಸುಝುಕಿ ಇಂಡಿಯಾದ ಅಧ್ಯಕ್ಷ ಆರ್.ಸಿ.ಭಾರ್ಗವ,ಗಾಯಕ ಉದಿತ್ ನಾರಾಯಣ ಮತ್ತು ಖ್ಯಾತ ನ್ಯಾಯವಾದಿ ಉಜ್ವಲ್ ನಿಕ್ಕಂ ಅವರೂ ಪದ್ಮ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಪದ್ಮ ವಿಭೂಷಣ ಪಡೆದವರು:ರಜನಿಕಾಂತ್,ಅತ್ರೆ,ಖ್ಯಾತ ಸಂಗೀತಗಾರ್ತಿ ಗಿರಿಜಾ ದೇವಿ ಮತ್ತು ಚೆನ್ನೈನ ಕ್ಯಾನ್ಸರ್ ಸಂಸ್ಥೆಯ ಅಧ್ಯಕ್ಷೆ ವಿ.ಶಾಂತಾ
ಪದ್ಮಭೂಷಣ ಪಡೆದವರು: ಭಾರ್ಗವ,ಜೈನ್,ಬ್ಲಾಕ್‌ವಿಲ್,ಮಿರ್ಝಾ,ಮಣಿಪುರಿ ನಾಟಕಕಾರ ಹೈಸ್ನಂ ಕನ್ಹೈಯಾಲಾಲ್,ಖ್ಯಾತ ಹಿಂದಿ ಮತ್ತು ತೆಲುಗು ಸಾಹಿತಿ ಯರ್ಲಗಡ್ಡ ಲಕ್ಷ್ಮೀ ಪ್ರಸಾದ್,ಆಧ್ಯಾತ್ಮಿಕ ನಾಯಕ ಸ್ವಾಮಿ ವೇದಾಂತ ದಯಾನಂದ ಸರಸ್ವತಿ(ಮರಣೋತ್ತರ),ಖ್ಯಾತ ಶಿಲ್ಪಿ ರಾಮ ವಾಂಜಿ ಸುತಾರ,ಸಾಹಿತ್ಯ ಮತ್ತು ಶಿಕ್ಷಣತಜ್ಞ ಎನ್.ಎಸ್.ರಾಮಾನುಜ ತಾತಾಚಾರ್ಯ ಮತ್ತು ಚಿನ್ಮಯ ಮಿಷನ್‌ನ ಅಂತರರಾಷ್ಟ್ರೀಯ ಮುಖ್ಯಸ್ಥ ಸ್ವಾಮಿ ತೇಜೋಮಯಾನಂದ
ಪ್ರಿಯಾಂಕಾ ಚೋಪ್ರಾ,ನಿಕ್ಕಂ,ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಧೀರೇಂದ್ರನಾಥ ಬೆಜ್‌ಬರೂವಾ, ಕನ್ನಡದ ಖ್ಯಾತ ಸಾಹಿತಿ ಎಸ್.ಎಲ್.ಬೈರಪ್ಪ, ಪುದುಚೇರಿಯ ಸಾಮಾಜಿಕ ಕಾರ್ಯಕರ್ತೆ ಮೆಡಲಿನ್ ಹರ್ಮನ್ ಡಿ ಬ್ಲಿಕ್ ಮತ್ತು ಬೋಡೊ ಸಾಹಿತ್ಯ ಸಭಾದ ಅಧ್ಯಕ್ಷ ಕಾಮೇಶ್ವರ ಬ್ರಹ್ಮ ಸೇರಿದಂತೆ 40 ಜನರು ಪದ್ಮಶ್ರೀ ಪ್ರಶಸ್ತಿಗಳನ್ನು ಸ್ವೀಕರಿಸಿದರು.