×
Ad

ತಮ್ಮ ಮಿಲಿಟರಿ ತಂತ್ರಜ್ಞಾನಗಳನ್ನು ಹೊಂದಿಸಿಕೊಳ್ಳಲು ಭಾರತ ಮತ್ತು ಅಮೆರಿಕ ಶ್ರಮಿಸಬೇಕಿವೆ:ಕಾರ್ಟರ್

Update: 2016-04-12 19:49 IST

ಪಣಜಿ,ಎ.12: ಭಾರತ ಮತ್ತು ಅಮೆರಿಕ ಪ್ರತ್ಯೇಕವಾಗಿ ಅಭಿವೃದ್ಧಿಗೊಳಿಸಿರುವ ತಮ್ಮ ಮಿಲಿಟರಿ ತಂತ್ರಜ್ಞಾನಗಳನ್ನು ಪರಸ್ಪರ ಅನುರೂಪವಾಗಿಸಲು ಕಠಿಣ ಶ್ರಮ ವಹಿಸಬೇಕಾಗಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಷ್ಟನ್ ಕಾರ್ಟರ್ ಅವರು ಹೇಳಿದ್ದಾರೆ.

ಭಾರತ-ಅಮೆರಿಕ ಸಂಬಂಧ ವೃದ್ಧಿಗೆ ನಾವು ಶ್ರಮಿಸಬೇಕಾಗಿದೆ ಎನ್ನುವುದಕ್ಕೆ ಐತಿಹಾಸಿಕ ಕಾರಣವಿದೆ. ಭಾರತವು ಏಳು ದಶಕಗಳ ಹಿಂದೆ ಹೊಸದಾಗಿ ಜನ್ಮ ತಾಳಿದ್ದು, ಅಮೆರಿಕದೊಂದಿಗೆ ಗುರುತಿಸಿಕೊಳ್ಳುವುದು ಅದರ ನೀತಿಯಾಗಿರಲಿಲ್ಲ ಎಂದು ಗೋವಾದ ಎಂಪಿಟಿಯಲ್ಲಿ ಲಂಗರು ಹಾಕಿರುವ ಯುಎಸ್‌ಎಸ್ ಬ್ಲೂ ರಿಡ್ಜ್ ನಲ್ಲಿ ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ಕಾರ್ಟರ್ ಹೇಳಿದರು.

ಇದರರ್ಥ ನಮ್ಮ ಮಿಲಿಟರಿಗಳು ಪ್ರತ್ಯೇಕವಾಗಿ ಅಭಿವೃದ್ಧಿಗೊಂಡಿವೆ,ನಮ್ಮ ತಂತ್ರಜ್ಞಾನ ವ್ಯವಸ್ಥೆಗಳು ಪ್ರತ್ಯೇಕವಾಗಿಯೇ ರೂಪುಗೊಂಡಿವೆ. ಹೀಗಾಗಿ ಈಗ ನಾವು ಒಂದಾಗಿ ಕೆಲಸ ಮಾಡುವಾಗ ನಮ್ಮ ತಂತ್ರಜ್ಞಾನಗಳ ನಡುವೆ ಹೊಂದಾಣಿಕೆಯನ್ನು ಸಾಧಿಸಲು ಪ್ರಯತ್ನಿಸಬೇಕಿದೆ. ಆ ನಿಟ್ಟಿನಲ್ಲಿ ನಾವು ಕಠಿಣ ಶ್ರಮವನ್ನು ವಹಿಸಬೇಕಿದೆ ಎಂದು ಅವರು ನುಡಿದರು.

ಮುಂಬೈನಿಂದ ಇಲ್ಲಿಗೆ ಆಗಮಿಸಿರುವ ಈ ಹಡಗಿಗೆ ಕಾರ್ಟರ್ ಮತ್ತು ರಕ್ಷಣಾ ಸಚಿವ ಮನೋಹರ ಪಾರ್ರಿಕರ್ ಅವರು ಸೋಮವಾರ ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News