ನೀರಿಗಾಗಿ ಧರಣಿ ನಾಚಿಕೆಗೇಡು: ಈಶ್ವರಪ್ಪ

Update: 2016-04-12 16:29 GMT

ಮಂಗಳೂರು, ಎ.12: ನೀರಿಗಾಗಿ ನಾಗರಿಕರು ಧರಣಿ ನಡೆಸುವ ನಡೆಸುವ ಅನಿವಾರ್ಯತೆ ಒದಗಿ ಬಂದಿರುವುದು ನಾಚಿಕೆಗೇಡು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಬಿಜೆಪಿ ಮಂಗಳೂರು ನಗರ ಉತ್ತರ ಮತ್ತು ದಕ್ಷಿಣ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ಎದುರು ಪಾಲಿಕೆ ವ್ಯಾಪ್ತಿಯಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಬಗ್ಗೆ ನಡೆದ ಧರಣಿಯನ್ನುದ್ದೇಶಿಸಿ ಅವರು ಮಾತನಾಡಿದರು.

ದ.ಕ. ಜಿಲ್ಲೆಯ ಮೂವರು ಸಚಿವರ ಸಹಿತ ಹತ್ತಿರದ ಉಡುಪಿ ಜಿಲ್ಲೆ ನಗರಾಭಿವೃದ್ಧಿ ಸಚಿವರು ಸೇರಿ ನಾಲ್ವರು ಸಚಿವರವನ್ನು ಹೊಂದಿದ್ದರೂ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸದಿರುವುದು ದುರದೃಷ್ಟಕರವಾಗಿದೆ. ಹತ್ತಿರ ದ.ಕ. ಜಿಲ್ಲೆಗೆ ನೀರಿನ ಸಮಸ್ಯೆಯನ್ನು ಪರಿಹರಿಸಲು ವಿಫಲವಾಗಿರುವ ವಿನಯಕುಮಾರ್ ಸೊರಕೆ ಅವರು ರಾಜ್ಯದ ನೀರಿನ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಜಿಲ್ಲೆಯ ಮೂವರು ಸಚಿವರು ಜನರ ಮೂಲಭೂತ ಸೌಕರ್ಯ ಮುಖ್ಯವಾಗಿಲ್ಲ. ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಿಲ್ಲ ಎಂದಾದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಈಶ್ವರಪ್ಪ ಸಚಿವರಿಗೆ ಸಲಹೆ ನೀಡಿದರು.

 ಪಾಲಿಕೆಯ ವಿಪಕ್ಷ ನಾಯಕಿ ರೂಪಾ ಡಿ.ಬಂಗೇರ ಮಾತನಾಡಿ, ಜನರಿಗೆ ಮೂಲಭೂತ ಸೌಕರ್ಯದ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಭರವಸೆಗಳನ್ನು ಈಡೇರಿಸದೆ ಜನರನ್ನು ಮರೆತಿದೆ. ಆಸ್ತಿ ತೆರಿಗೆ ಹೆಚ್ಚಿಸುವುದಿಲ್ಲ ಎಂದು ಹೇಳಿ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಆಸ್ತಿ ತೆರಿಗೆಯನ್ನು ಹೆಚ್ಚಿಸಿ ನಾಗರಿಕರ ಮೇಲೆ ಹೊರೆ ಹಾಕಿದೆ. ಪಾಲಿಕೆ ವ್ಯಾಪ್ತಿಯಾದ್ಯಂತ ದಿನದಿಂದ ದಿನಕ್ಕೆ ನೀರಿನ ಸಮಸ್ಯೆಗಳು ಉಲ್ಭಣಗೊಳ್ಳುತ್ತಿದೆ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಆಡಳಿತ ಪಕ್ಷ ವಿಫಲವಾಗಿದೆ. ಬಿಜೆಪಿ ಆಡಳಿತದ ಸಂದರ್ಭದಲ್ಲಿ ನೀರಿಗಾಗಿ ಪ್ರತಿಭಟನೆ, ಹೋರಾಟಗಳಿಗೆ ಕಡಿವಾಣ ಬಿದ್ದಿದ್ದವು ಎಂದರು.

ತುಂಬೆಯಿಂದ ನಗರಕ್ಕೆ ಬರುವ ನೀರು ಎಲ್ಲಿ ಹೋಗುತ್ತಿವೆ? ಇಲ್ಲಿನ ಜನರಿಗೆ ಯಾಕೆ ನೀರು ಸಿಗುತ್ತಿಲ್ಲ. ಇಲ್ಲಿನ ಜನರು ತೆರಿಗೆ ಕಟ್ತಾ ಇಲ್ವೇ? ಎಂದು ರೂಪಾ ಬಂಗೇರ ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಉಪ ಮೇಯರ್ ಸುಮಿತ್ರಾ ಕೆ., ಬಿಜೆಪಿ ಮುಖಂಡರಾದ ಪ್ರತಾಪ್ ಸಿಂಹ ನಾಯಕ್, ಸುನಿಲ್ ಕುಮಾರ್, ಯೋಗೀಶ್ ಭಟ್, ಮೋನಪ್ಪ ಭಂಡಾರಿ, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ರವಿಶಂಕರ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News