×
Ad

ಉಪ್ಪಿನಂಗಡಿ: ಮಾರಕ ಆಯುಧಗಳೊಂದಿಗೆ ಕ್ವಾಲಿಸ್ ವಾಹನದಲ್ಲಿ ಬರುತ್ತಿದ್ದ ಐವರ ಬಂಧನ

Update: 2016-04-12 22:04 IST

 ಉಪ್ಪಿನಂಗಡಿ: ಮಾರಕ ಆಯುಧಗಳೊಂದಿಗೆ ಕ್ವಾಲಿಸ್ ವಾಹನದಲ್ಲಿ ನೆಲ್ಯಾಡಿ ಕಡೆಯಿಂದ ಗುಂಡ್ಯ ಕಡೆ ಬರುತ್ತಿದ್ದ ಏಳು ಮಂದಿಯ ತಂಡದಲ್ಲಿ ಐವರನ್ನು ಸಿರಿಬಾಗಿಲು ಗ್ರಾಮದ ಗುಂಡ್ಯ ಚೆಕ್ ಪಾಯಿಂಟ್ ಬಳಿ ಪೊಲೀಸರು ಬಂಧಿಸಿದ್ದು, ಇಬ್ಬರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಮೆಣಸಿನ ಪುಡಿ ಸಹಿತ ಮಾರಕಾಸ್ತ್ರಗಳ ಸಹಿತ ರೂ. 4,92,500 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರೊಬೆಷನರಿ ಎಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.

 ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸೋಮವಾರ ರಾತ್ರಿ ಸಕಲೇಶಪುರ ಗಡಿ ಪ್ರದೇಶದಲ್ಲಿ ದರೋಡೆಯಾಗಿರುವ ಮಾಹಿತಿ ಬಂದ ಮೇರೆಗೆ ನಾವು ಅಲ್ಲಿಗೆ ತೆರಳಿದ್ದೆವು. ನಸುಕಿನ ಜಾವ ಮೂರರ ಸುಮಾರಿಗೆ ದರೋಡೆ ಸಂಚು ರೂಪಿಸಿ ಗುಂಡ್ಯ ಕಡೆಗೆ ಹಿಮಾಚಲ್ ಪ್ರದೇಶ ನೋಂದಣಿ ಸಂಖ್ಯೆಯ ಹಸಿರು ಬಣ್ಣದ ಕ್ವಾಲೀಸ್ ವಾಹನದಲ್ಲಿ ತಂಡವೊಂದು ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ನಸುಕಿನ ಜಾವ ಮೂರುವರೆಯ ಸುಮಾರಿಗೆ ಗುಂಡ್ಯದ ಚೆಕ್ ಪಾಯಿಂಟ್ ಬಳಿ ವಾಹನವನ್ನು ನಿಲ್ಲುವಂತೆ ಸೂಚಿಸಿದಾಗ ಸ್ವಲ್ಪ ದೂರ ಹೋಗಿ ವಾಹನ ನಿಲ್ಲಿಸಿ ಅದರಲ್ಲಿದ್ದ ಇಬ್ಬರು ಪರಾರಿಯಾಗಿದ್ದು, ಉಳಿದವರು ಪರಾರಿಯಾಗಲೆತ್ನಿಸುತ್ತಿದ್ದಾಗ ಪೊಲೀಸರು ಅವರನ್ನು ಅಡ್ಡಗಟ್ಟಿ ಬಂಧಿಸಿದ್ದಾರೆ.

  ಬಂಧಿತರನ್ನು ಅಳಕೆ ಗ್ರಾಮದ ಕಾಂತಡ್ಕ ನಿವಾಸಿ ಅಬ್ದುರ್ರಹ್ಮಾನ್ (34), ಉಪ್ಪಿನಂಗಡಿ ಗ್ರಾಮದ ಕೋಟೆ ನಿವಾಸಿ ಮುಹಮ್ಮದ್ ಕಬೀರ್ (51), ವಿಟ್ಲ ಗ್ರಾಮದ ಒಕ್ಕೆತ್ತೂರು ನಿವಾಸಿ ಅಬೂಬಕ್ಕರ್ (60), ವಿಟ್ಲ ಗ್ರಾಮದ ಕಾಂತಡ್ಕ ನಿವಾಸಿ ಅದ್ರಾಮ (42), ಇಳಂತಿಲ ಗ್ರಾಮದ ಕಡವಿನ ಬಾಗಿಲು ನಿವಾಸಿ ಅಬ್ದುಲ್ ಖಾದರ್ (42) ಎಂದು ಗುರುತಿಸಲಾಗಿದೆ. ವಿಟ್ಲದ ಮುಹಮ್ಮದ್ ಪುತ್ತು ಹಾಗೂ ಇಬ್ರಾಹಿಂ ಪರಾರಿಯಾಗಿದ್ದಾರೆ. ಬಂಧಿತರಿಂದ 69,500 ರೂಪಾಯಿ ನಗದು, ಆರು ಮೊಬೈಲ್ ಸೆಟ್, 5 ಚಾಕು, 2ಕತ್ತಿ, 5 ಟಾರ್ಚ್ ಲೈಟ್, 3 ಮಂಕಿ ಕ್ಯಾಪ್, ಒಂದು ಸಿಂಗಲ್ ಬ್ಯಾರೆಲ್ ಕೋವಿ ಹಾಗೂ ಎರಡು ಪ್ಯಾಕೇಟ್ ಮೆಣಸಿನ ಹುಡಿ, ಒಂದು ತೋಟೆ, ಎಂಟು ಚೆರಲ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ನಗದು, ವಾಹನ ಸೇರಿ ವಶಪಡಿಸಿಕೊಂಡ ಒಟ್ಟು ಸೊತ್ತಿನ ಮೌಲ್ಯ ರೂ. 4,92,500 ಎಂದು ಅಂದಾಜಿಸಲಾಗಿದೆ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ತಲೆಮರೆಸಿಕೊಂಡವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಎಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಶರಣಪ್ಪ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸೆಂಟ್ ಶಾಂತಕುಮಾರ್‌ರ ಮಾರ್ಗದರ್ಶನದಂತೆ ಪುತ್ತೂರು ಎಎಸ್ಪಿ ರಿಷ್ಯಂತ್ ಹಾಗೂ ಪ್ರೊಬೆಷನರಿ ಎಎಸ್ಪಿ ಲಕ್ಷ್ಮಣ್ ನಿಂಬರ್ಗಿ ಅವರ ಆದೇಶದಂತೆ ನಡೆದ ಈ ಕಾರ್ಯಾಚರಣೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ, ಎಎಸ್‌ಐಗಳಾದ ಯೊಗೀಂದ್ರ, ಸಂಜೀವ ರೈ, ಸಿಬ್ಬಂದಿ ಶ್ರೀಧರ್ ರೈ, ಚೋಮ ಪಿ., ಸುಧಾಕರ್, ಶ್ರೀಧರ್, ರಾಧಾಕೃಷ್ಣ, ಮಧು ಕೆ.ಎನ್., ಮನೋಹರ್, ಹರೀಶ್, ಜೀಪು ಚಾಲಕರಾದ ಸತ್ಯಪ್ರಕಾಶ್, ರಘುರಾಮ್, ರಾಜು ಪೂಜಾರಿ, ಹೋಂಗಾರ್ಡ್ ಸಿಬ್ಬಂದಿಗಳಾದ ಚೇತನ್, ದಿನೇಶ್, ಚರಣ್ ಹಾಗೂ ರಿಜು ತೋಮಸ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News