ಬ್ಯಾಂಕ್ ಸಾಲ ಬಾಕಿಯ ಒಟ್ಟು ಮೊತ್ತ ಬಹಿರಂಗಕ್ಕೆ ಸುಪ್ರೀಂ ಒಲವು: ಆರ್‌ಬಿಐ ವಿರೋಧ
ಹೊಸದಿಲ್ಲಿ, ಎ.12: ಬ್ಯಾಂಕುಗಳು ವಿವಿಧ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ ನೀಡಿರುವ ಸಾಲದಲ್ಲಿ ಮರುಪಾವತಿಗೆ ಬಾಕಿ ಯಿರುವ ಒಟ್ಟು ಮೊತ್ತವನ್ನು ಬಹಿರಂಗಪಡಿಸುವ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಒಲವು ವ್ಯಕ್ತಪಡಿಸಿದೆ. ಆರ್‌ಬಿಐ, ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ನೀಡಿರುವ ಮಾಹಿ ತಿಯ ಪ್ರಕಾರ ಈ ಮೊತ್ತ ಲಕ್ಷಾಂತರ ಕೋಟಿ ರೂ.ಗಳಾಗಿವೆ.
ಈ ಮಾಹಿತಿಯಿಂದ ಪ್ರಕರಣವೊಂದನ್ನು ರೂಪಿಸಬಹುದು. ಇದರಲ್ಲಿ ಒಳಗೊಂಡಿರುವ ಹಣವು ಭಾರೀ ಪ್ರಮಾಣದ್ದಾಗಿದೆಯೆಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹಾಗೂ ನ್ಯಾಯಮೂರ್ತಿ ಭಾನುಮತಿಯವರನ್ನೊಳಗೊಂಡ ಪೀಠವೊಂದು ಹೇಳಿದೆ. ಆದಾಗ್ಯೂ, ಇದನ್ನು ಆರ್‌ಬಿಐ ತಿರಸ್ಕರಿಸಿದ್ದು, ಇಲ್ಲೊಂದು ಗೌಪ್ಯ ಪಾಲನಾ ಪರಿಚ್ಛೇದವಿದೆ ಹಾಗೂ ಸಂಖ್ಯೆಯನ್ನು ಬಹಿರಂಗಪಡಿಸಿದರೆ, ಅದರದೇ ಆದ ಪರಿಣಾಮ ಉಂಟಾಗಬಹುದು ಎಂದಿದೆ.
ಈ ವಿಷಯವು ಬಹಳ ಪ್ರಮುಖವಾದುದೆಂಬುದನ್ನು ಉಲ್ಲೇಖಿಸಿದ ನ್ಯಾಯಪೀಠ, ಕೋಟಿಗಟ್ಟಲೆ ರೂ. ಪ್ರಮಾಣದಲ್ಲಿರುವ ಸಾಲ ಬಾಕಿಯ ಒಟ್ಟು ಮೊತ್ತ ವನ್ನು ಬಹಿರಂಗಪಡಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸು ವೆನೆಂದು ಹೇಳಿದೆ. ಈ ವಿಷಯದಲ್ಲಿ ಒಳಗೊಂಡಿರುವ ಪಕ್ಷಗಳಿಗೆ ಚರ್ಚಿಸಬಹುದಾದ ವಿವಿಧ ವಿಷಯಗಳನ್ನು ರೂಪಿಸುವಂತೆ ಅದು ಆದೇಶ ನೀಡಿದೆ.
ವಿತ್ತ ಸಚಿವಾಲಯ ಹಾಗೂ ಭಾರತೀಯ ಬ್ಯಾಂಕುಗಳ ಒಕ್ಕೂಟ ಕಕ್ಷಿದಾರರಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಾಧ್ಯತೆಯನ್ನು ವಿಸ್ತರಿಸಿರುವ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಎ.26ಕ್ಕೆ ಮುಂದೂಡಿದೆ.
ಸಾರ್ವಜನಿಕ ಹಿತಾಸಕ್ತಿ ದೂರುಗಳ ಕೇಂದ್ರ (ಸಿಪಿಐಎಲ್) ಎಂಬ ಸರಕಾರೇತರ ಸಂಘಟನೆ, 2003ರಲ್ಲಿ ದಾಖಲಿಸಿದ್ದ ಈ ಅರ್ಜಿಯು ಮೂಲತಃ, ಸರಕಾರಿ ಸ್ವಾಮ್ಯದ ಗೃಹ ನಿರ್ಮಾಣ ಮತ್ತು ನಗರಾಭಿವೃದ್ಧಿ ಪ್ರಾಧಿಕಾರವು (ಹುಡ್ಕೊ) ಕೆಲವು ಕಂಪೆನಿಗಳಿಗೆ ನೀಡಿರುವ ಸಾಲದ ವಿಚಾರವನ್ನೆತ್ತಿತ್ತು. 2015ರಲ್ಲಿ ಸುಮಾರು 40 ಸಾವಿರ ಕೋಟಿ ರೂ. ಕಾರ್ಪೊರೇಟ್ ಸಾಲವನ್ನು ಮನ್ನಾ ಮಾಡಲಾಗಿದೆಯೆಂದು ಅದು ಹೇಳಿದೆ.
ಕೆಟ್ಟ ಸಾಲಗಳ ಹೆಚ್ಚಳದ ಕುರಿತು ಗಂಭೀರ ಕಳವಳ ವ್ಯಕ್ತ ಪಡಿಸಿದ್ದ ಸುಪ್ರೀಂ ಕೋರ್ಟ್, ರೂ. 500 ಕೋಟಿಗಳಿಗಿಂತ ಹೆಚ್ಚು ಬ್ಯಾಂಕ್ ಸಾಲಗಳನ್ನು ಬಾಕಿ ಮಾಡಿರುವ ಕಂಪೆನಿಗಳ ಪಟ್ಟಿ ಯೊಂದನ್ನು ನೀಡುವಂತೆ ಈ ಹಿಂದೆ ಆರ್‌ಬಿಐಯಲ್ಲಿ ಕೇಳಿತ್ತು.