×
Ad

ಬಂಟ್ವಾಳ: ‘ಪಚ್ಚೆಪರ್ಬ’ ಮಕ್ಕಳ ಶಿಬಿರಕ್ಕೆ ಚಾಲನೆ

Update: 2016-04-12 23:46 IST

ಬಂಟ್ವಾಳ, ಎ.12: ನೀರಿಲ್ಲದೆ ಒಳಗಿದ್ದ ಕೆರೆಯಾಳದಲ್ಲಿ ಮಣ್ಣು ಅಗೆದು ನೀರು ಹುಡುಕುವ ಆಟದೊಂದಿಗೆ ಮಣಿನಾಲ್ಕೂರು ಪಚ್ಚೆ ಅಂಗಳದಲ್ಲಿ ಆಯೋಜನೆಗೊಂಡ 4ನೆ ವರ್ಷದ ಪಚ್ಚೆಪರ್ಬ ಮಕ್ಕಳ ಪರಿಸರ ಶಿಬಿರಕ್ಕೆ ಚಾಲನೆ ನೀಡಲಾಯಿತು. ಸ್ಥಳೀಯ ಮಕ್ಕಳೊಂದಿಗೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಯುವಜನರು, ಅತಿಥಿಗಳು, ನೆಂಟರು, ಸಾಮಾಜಿಕ ಕಾರ್ಯಕರ್ತರು ಇದಕ್ಕೆ ಸಾಕ್ಷಿಯಾದರು. ಕೆರೆಯಾಳದಿಂದ ಬಗೆದ ಮಣ್ಣನ್ನು ಮಾನವ ಸರಪಳಿ ಮೂಲಕ ಕುಕ್ಕುದಡಿಗೆ ತಲುಪಿಸಿ ಕಲಾವಿದ ಶಿವಾನಂದ ಉಳಿ ಅವರಿಂದ ನೀರಿನ ಬವಣೆ ನಿರೂಪಿಸುವ ಮಣ್ಣಿನ ಉಬ್ಬುಶಿಲ್ಪರಚಿಸಲಾಯಿತು.ತಾಸೆ, ಡೋಲು, ಚೆಂಡೆ ಕಲರವಗಳ ಮೂಲಕ ನೃತ್ಯದ ಸಂಭ್ರಮ, ಹಳ್ಳಿಗೋಗೋಣ ನಾವು... ಹಾಡಿನ ಮೂಲಕ ಪರಿಸರ ಪ್ರೀತಿ, ನೀರಿನ ಅತಿ ಕಡಿಮೆ ಬಳಕೆ ಮತ್ತು ಪರಿಸರದ ನೈಜ ಸ್ಥಿತಿಗತಿಗಳ ಅರ್ಥೈಸುವಿಕೆ, ಅಜ್ಜಿಮನೆಯಲ್ಲಿ ಹಿರಿಯ ರಂಗಕರ್ಮಿ ಐವನ್ ಡಿಸಿಲ್ವಾರ ವಿಜ್ಞಾನ ಅಭಿನಯ ಗೀತೆ, ನಿನಾಸಂ ರಂಗ ಕಲಾವಿದರಾದ ಮೋಹನ್ ಶೇಣಿ, ಬಿಂದು ರಕ್ಷಿದಿಯವರ ಸಿಗ್ನೇಚರ್ ಕುಣಿತ, ಹಳ್ಳಿ ಸೊಗಡಿನ ಆಹಾರ-ಕಷಾಯ, ನೇಲೆಚಕ್ರದ ನೇತಾಟ, ಜೋಕಾಲಿ ಜೀಕಾಟ, ಶಾಲಾ/ಕಾಲೇಜಿನ ಪಾಠ-ಪ್ರವಚನ ಮೀರಿದ ಮುಕ್ತ ಕಲಿಕೆ... ಇವೆಲ್ಲವೂ ಈ ಪಚ್ಚೆಪರ್ಬದ ಕೆಲವು ಝಲಕ್‌ಗಳು. ಉದ್ಘಾಟನಾ ಚಟುವಟಿಕೆಯೂ ಯಾವುದೇ ಅತಿಥಿಗಳ ಭಾಷಣ, ಪಾಠಗಳಿಲ್ಲದೆ ಮಕ್ಕಳ ಮುಕ್ತ ವೇದಿಕೆಯಾಗಿ ಭಿನ್ನವಾಗಿ ಗುರುತಿಸಿಕೊಂಡಿತು. ಸಂಜೆ ಅರಿವು ಪಚ್ಚೆ ಬಳಗದ ಯುವಜನರಿಂದ ನಡೆದ ಪರತಿ ಮಂಙಣೆ ರಂಗ ನಾಟಕ ಗಮನಸೆಳೆಯಿತು.ರಂಗ ಸಾಂಗತ್ಯ ಮಣಿನಾಲ್ಕೂರು, ಅರಿವು ಪಚ್ಚೆ ಬಳಗ ಬಂಟ್ವಾಳ, ಅರಿವು ಯುವ ಸಂವಾದ ಕೇಂದ್ರ, ದ.ಕ.ಜಿಲ್ಲೆ. ಸಂಸ್ಥೆಗಳು ಸಂಯೋಜಿಸಿರುವ ಪಚ್ಚೆಪರ್ಬ ಶಿಬಿರವು ಎ.13ರಂದು ಸಮಾಪನಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News