×
Ad

ಮಂಗಳೂರು: ಕೇಂದ್ರ ಸರಕಾರದ ಕೋಟ್ಪಾ ಕಾಯಿದೆ ವಿರುದ್ದ ಪ್ರತಿಭಟನೆ

Update: 2016-04-12 23:54 IST

        ಮಂಗಳೂರು,ಎ.12: ಕೇಂದ್ರ ಸರಕಾರ ಕೋಟ್ಪಾ ಕಾಯಿದೆಯನ್ನು ಜಾರಿಗೊಳಿಸಬಾರದು, ಬೀಡಿ ಮಾಲೀಕರು ಕೆಲಸ ಸ್ಥಗಿತಗೊಳಿಸಿರುವುದನ್ನು ರದ್ದುಗೊಳಿಸಿ ಕೆಲಸ ಪ್ರಾರಂಭಿಸಲು ನಿರ್ದೇಶನ ನೀಡಬೇಕು ಹಾಗೂ ಬೀಡಿ ಕಾರ್ಮಿಕರಿಗೆ ಕೆಲಸ ಪ್ರಾರಂಭವಾಗುವ ತನಕ ಬೀಡಿ ಕಾರ್ಮಿಕರಿಗೆ ಜೀವನ ನಿರ್ವಹಣೆಗೆ ಪರಿಹಾರ ನೀಡಲು ನಿರ್ದೇಶಿಸಬೇಕೆಂದು ಒತ್ತಾಯಿಸಿ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ (ಸಿಐಟಿಯು), ಎಸ್.ಕೆ. ಬೀಡಿ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ), ಬೀಡಿ ಮಜ್ದೂರ್ ಸಂಘ(ಬಿಎಂಎಸ್) ಮತ್ತು ದಕ್ಷಿಣ ಕನ್ನಡ ,ಉಡುಪಿ ಜಿಲ್ಲಾ ಬೀಡಿ ಕಾಂಟ್ರಾಕ್ಟುದಾರರ ಸಂಘದ ನೇತೃತ್ವದಲ್ಲಿ ಇಂದು ಕದ್ರಿಯ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸೌತ್ ಕೆನರಾ ಬೀಡಿ ವರ್ಕರ್ರ್ಸ್‌ ೆಡರೇಶನ್‌ನ ಪ್ರ.ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ, ಕೇಂದ್ರ ಸರಕಾರವು ಏ.1ರಿಂದ ಕೋಟ್ಪಾ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹೊರಟಿದೆ. ಬೀಡಿ ಲೇಬಲ್ ಮೇಲೆ ಶೇ. 85ರಷ್ಟು ಆರೋಗ್ಯಕ್ಕೆ ಹಾನಿಕಾರಕ ಎಂಬ ಸಚಿತ್ರ ಎಚ್ಚರಿಕೆಯನ್ನು ಮುದ್ರಿಸುವುದನ್ನು ಕಡ್ಡಾಯಗೊಳಿಸಿದೆ. ಇದರಿಂದ ಬೀಡಿ ಸಂಸ್ಥೆಯ ಹೆಸರು ಕೂಡ ನಮೂದಿಸಲು ಕಷ್ಟದಾಯಕವಾಗಿದೆ. ಸರಕಾರ ತತ್‌ಕ್ಷಣ ಈ ನಿರ್ಧಾರದಿಂದ ಹಿಂದೆ ಸರಿದು ಬೀಡಿ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

 ಕೇಂದ್ರದ ಈ ನಿರ್ಧಾರದಿಂದ ಬೀಡಿ ಉದ್ಯಮವನ್ನೇ ನಂಬಿದ್ದ ಕುಟುಂಬಗಳ ಜೀವನ ನಿರ್ವಹಣೆಗೆ ಸಮಸ್ಯೆಯಾಗಿದೆ. ಕಳೆದ ಕೆಲವು ದಿನಗಳಿಂದ ಬೀಡಿ ಮಾಲಕರು ಕೈಗಾರಿಕಾ ಕೆಲಸವನ್ನು ಸ್ಥಗಿತಗೊಳಿಸಿರುವುದನ್ನು ತತ್‌ಕ್ಷಣ ತೆರವುಗೊಳಿಸಬೇಕು. ಸರಕಾರ ತನ್ನ ಹಠಮಾರಿ ಪ್ರವೃತ್ತಿಯನ್ನು ಬಿಟ್ಟು ತತ್‌ಕ್ಷಣ ಬದಲಿ ವ್ಯವಸ್ಥೆಯನ್ನು ಕಲ್ಪಿಸಬೇಕು. ಮುಂದಿನ ಒಂದು ವಾರದೊಳಗೆ ಈ ಸಂಬಂಧ ಬೀಡಿ ಕಾರ್ಮಿಕರಿಗೆ ಸರಕಾರ ಭರವಸೆ ನೀಡಬೇಕು. ಇಲ್ಲವಾದಲ್ಲಿ ಹೋರಾಟವನ್ನು ತೀವ್ರ ಸ್ವರೂಪಕ್ಕೆ ಕೊಂಡೊಯ್ಯಲಾಗುವುದು. ಅಲ್ಲದೇ ಬೀಡಿ ಕಾರ್ಮಿಕರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವ ಬಗ್ಗೆ ನಿರ್ಧರಿಸಲಾಗುವುದು ಎಂದರು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾ ಸಹ ಕಾರ್ಯದರ್ಶಿ ನೂರು ವರ್ಷಗಳ ಇತಿಹಾಸವಿರುವ ಬೀಡಿ ಕೈಗಾರಿಕೆಯನ್ನು ಯಾವುದೆ ಮಾಹಿತಿ ನೀಡಿದೆ ಮುಚ್ಚಲು ಹೊರಟಿರುವ ನಿರ್ಧಾರ ಸರಿಯಲ್ಲ. ಕಾರ್ಮಿಕರನ್ನು ಉಪವಾಸ ಬೀಳುವಂತೆ ಮಾಡಿ ಕಾನೂನು ಜಾರಿಗೊಳಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.

  ಪ್ರತಿಭಟನೆಯ ಬಳಿಕ ಸಹಾಯಕ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸಹಾಯಕ ಕಾರ್ಮಿಕ ಆಯುಕ್ತ ನಾಗೇಶ್, ಬೀಡಿ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸುವುದರೊಂದಿಗೆ ಕಾರ್ಮಿಕರ ಜೀವನ ನಿರ್ವಹಣೆಗೆ ಪರಿಹಾರ ನೀಡುವ ಬಗ್ಗೆ ಸಂಬಂಧಪಟ್ಟವರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು. ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಬಿ, ವಿಶ್ವನಾಥ ಶೆಟ್ಟಿ, ವಸಂತ ಆಚಾರಿ, ಕೃಷ್ಣಪ್ಪ, ಆಲಿಯಬ್ಬ, ಮೊಹಮ್ಮದ್ ರಫಿ, ಲಕ್ಷ್ಮಣ ರಂಗಿಪೇಟೆ, ರವಿ ಉಡುಪಿ, ಖಾದರ್ ಸುರತ್ಕಲ್, ಶರ್ೀ , ಹೆಚ್.ವಿ.ರಾವ್, ಸುರೇಶ ಕುಮಾರ್ ಬಂಟ್ವಾಳ, ಸುಲೋಚನ ಕವತ್ತಾರು,ಕರುಣಾಕರ್ ಕುಲಾಲ್ , ಶಿವಪ್ಪ ಕೋಟ್ಯಾನ್, ಚಿತ್ರಾಕ್ಷಿ, ಭಾರತಿ ಬೋಳಾರ, ಯು,ಬಿ.ಲೋಕಯ್ಯಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

   ಪ್ರತಿಭಟನಾ ಸಭೆಗೆ ಆಗಮಿಸಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರು ಬೀಡಿ ಕಾರ್ಮಿಕರು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಬೀಡಿ ಸೇವನೆ ಮಾಡಿ ಯಾರು ಸತ್ತು ಹೋದಂತಹ ಘಟನೆ ನಡೆದಿಲ್ಲ. ಬೀಡಿ ಲೇಬಲ್ ಮೇಲೆ ಶೇ.85 ಜಾಗದಲ್ಲಿ ಎಚ್ಚರಿಕೆಯನ್ನು ಮುದ್ರಿಸಲು ಬಿಡುವುದಿಲ್ಲ .

  ಬೀಡಿ ಕಾರ್ಮಿಕರ ಪರವಾಗಿ ವಿಧಾನಪರಿಷತ್‌ನಲ್ಲಿ ಧ್ವನಿಯೆತ್ತಿದ್ದು ಮುಂದೆಯೂ ಯಾವುದೆ ರಾಜಕೀಯವಿಲ್ಲದೆ ಬೀಡಿ ಕಾರ್ಮಿಕರ ಪರವಾಗಿ ನಿಂತು ಮಾತನಾಡುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News