ಮೂಜೂರು ಅರಣ್ಯ ಪ್ರದೇಶದಲ್ಲಿ ಮತ್ತೆ ಬೆಂಕಿ
Update: 2016-04-12 23:56 IST
ಕಡಬ, ಎ.12. ಸುಬ್ರಹ್ಮಣ್ಯ ಅರಣ್ಯ ವಲಯದ ಸುಂಕದಕಟ್ಟೆ ಸಮೀ ಪದ ಮೂಜೂರು ಮೀಸಲು ಅರಣ್ಯ ಪ್ರದೇಶಕ್ಕೆ ಆರು ದಿನಗಳ ಹಿಂದೆ ಬಿದ್ದಿದ್ದ ಬೆಂಕಿಯನ್ನು ಸೋಮವಾರದಂದು ನಂದಿಸಿದ್ದು, ಮಂಗಳವಾರ ಮುಂಜಾನೆ ಮತ್ತೆ ಬೆಂಕಿ ಕಂಡು ಬಂದಿದ್ದು ಅಧಿಕಾರಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ರವಿವಾರ ರಾತ್ರಿಯವರೆಗೆ ನಡೆಸಿದ್ದ ಕಾರ್ಯಚರಣೆಯಲ್ಲಿ ಬೆಂಕಿಯನ್ನು ನಂದಿಸಲಾಗಿತ್ತಾದರೂ ಯಾರೋ ಕಿಡಿಗೇಡಿಗಳು ಸೋಮವಾರದಂದು ಕಾಡಿನ ಇನ್ನೊಂದು ಪಾರ್ಶ್ವಕ್ಕೆ ಬೆಂಕಿ ಹಚ್ಚಿದ್ದರಿಂದ ಕಾರ್ಯಾಚರಣೆ ಮುಂದುವರಿದಿತ್ತು. ಕಳೆದ ರಾತ್ರಿ ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದ ಅರಣ್ಯ ಅಧಿಕಾರಿಗಳಿಗೆ ಮಂಗಳವಾರ ಮತ್ತೆ ಬೆಂಕಿ ಕಂಡುಬಂದಿರುವುದು ತಲೆನೋವಾಗಿ ಪರಿಣಮಿಸಿದೆ.
ಯಾವುದೋ ಬಿದಿರಿನಲ್ಲಿದ್ದ ಬೆಂಕಿಯ ಕಿಡಿಯಿಂದಾಗಿ ಮತ್ತೆ ಬೆಂಕಿ ಹಬ್ಬಿರಬಹುದೆಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ ಅಭಿಪ್ರಾಯಪಟ್ಟಿದ್ದಾರೆ.