ಚೆಂಬರಿಕ ಖಾಝಿ ನಿಗೂಢ ಮರಣ ಪ್ರಕರಣ: ಸಿಬಿಐ ಮರುತನಿಖೆ ಚುರುಕು
Update: 2016-04-13 09:46 IST
ಕಾಸರಗೋಡು, ಎ.13: ಮಂಗಳೂರು ಹಾಗೂ ಚೆಂಬರಿಕ ಖಾಝಿಯಾಗಿದ್ದ ಸಿ.ಎಂ.ಅಬ್ದುಲ್ಲ ಮೌಲವಿಯವರ ನಿಗೂಡ ಮರಣದ ಕುರಿತು ಸಿಬಿಐ ಮರುತನಿಖೆ ಆರಂಭಗೊಂಡಿದೆ.
ಸಿ.ಎಂ. ಉಸ್ತಾದ್‌ರ ಪುತ್ರ ಶಾಫಿ ನೀಡಿರುವ ದೂರಿನನ್ವಯ ಪ್ರಕರಣದ ಮರುತನಿಖೆಗೆ ಕೇರಳ ಹೈಕೋರ್ಟ್ ಆದೇಶಿಸಿದ್ದು, ಅದರಂತೆ ಮರು ತನಿಖೆ ನಡೆಯುತ್ತಿದೆ. ಇದೀಗ ಸಿಬಿಐನ ತಿರುವನಂತಪುರ ಘಟಕದ ಎಸ್ಪಿ ಜೋಸ್ ಮೋಹನ್ ನೇತೃತ್ವದ ತಂಡವು ಬೇಕಲ ಚೆಂಬರಿಕಕ್ಕೆ ಆಗಮಿಸಿ ತನಿಖೆ ನಡೆಸಿದೆ.
ಖಾಝಿಯವರ ಪುತ್ರ ಶಾಫಿಯವರಿಂದ ತನಿಖಾ ತಂಡ ಮಾಹಿತಿ ಕಲೆ ಹಾಕಿದೆ. ಸಮಗ್ರವಾದ ತನಿಖೆ ನಡೆಸಿ ಮೇ 27ರೊಳಗೆ ವರದಿ ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ.
ಖಾಝಿಯವರ ಕನ್ನಡಕ, ಚಪ್ಪಲಿ, ಊರುಗೋಲು ಪತ್ತೆಯಾದ ಚೆಂಬರಿಕ ಸಮುದ್ರದ ಬಂಡೆಕಲ್ಲಿ ನ ಮೇಲೆ ವಯೋವೃದ್ಧರಾಗಿದ್ದ ಖಾಝಿಯವರು ಹೇಗೆ ತಲುಪಿದ್ದರು ಎಂಬ ಬಗ್ಗೆ ತಂಡವು ವೈಜ್ಞಾನಿಕ ತಪಾಸಣೆ ನಡೆಸಲಿದೆ.