ಜ್ಯೋತಿ ಸರ್ಕಲ್‌ನ ಡಾ.ಅಂಬೇಡ್ಕರ್ ಹೆಸರು ಮರೆಮಾಚುವ ಬ್ಯಾಂಕ್ ನಾಮಫಲಕ ತೆರವಿಗೆ ಆಗ್ರಹ

Update: 2016-04-13 06:57 GMT

ಮಂಗಳೂರು, ಎ.13: ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ (ಜ್ಯೋತಿ ಸರ್ಕಲ್) ಅಂಬೇಡ್ಕರ್‌ರ ಹೆಸರನ್ನು ಮರೆಮಾಚುವ ರಾಷ್ಟ್ರೀಕೃತ ಬ್ಯಾಂಕ್‌ನ ನಾಮಫಲಕವನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲವಾದರೆ ಅದನ್ನು ನಾವೇ ಕಿತ್ತು ಹಾಕುತ್ತೇವೆ ಎಂದು ದಲಿತ ಮುಖಂಡರು ಇಂದು ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು ಮಿನಿವಿಧಾನಸೌಧದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ನಡೆದ ದಲಿತ ಕುಂದುಕೊರತೆ ಸಭೆಯಲ್ಲಿ ಈ ಎಚ್ಚರಿಕೆ ಕೇಳಿಬಂತು.
ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡ ಚಿನ್ನಪ್ಪಬಂಗೇರ, ಈ ನಾಮಫಲಕ ವಿಚಾರವನ್ನು ಕಳೆದ ಹಲವು ವರ್ಷಗಳಿಂದ ದಲಿತ ಕುಂದುಕೊರತೆ ಸಭೆಯಲ್ಲಿ ಪ್ರಸ್ತಾವಿಸುತ್ತಿದ್ದೇವೆ. ಆದರೆ ಅದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿಲ್ಲ. ಆ ಮೂಲಕ ರಾಷ್ಟ್ರ ನಾಯಕರಿಗೆ ಅವಮಾನ ಮಾಡಲಾಗುತ್ತಿದೆ. ಡಾ.ಬಿ.ಆರ್‌ಯಅಂಬೇಡ್ಕರ್ ವೃತ್ತದಲ್ಲಿರುವ ನಾಮಫಲಕವನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳದಿದ್ದರೆ ಅದನ್ನು ನಾವೇ ತೆರವುಗೊಳಿಸುತ್ತೇವೆ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರರು ಕೂಡಲೆ ಅದನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
  ದಲಿತ ಮುಖಂಡ ರಮೇಶ್ ಕೋಟ್ಯಾನ್ ಮಾತನಾಡಿ, ಅಡ್ಯಾರ್‌ನಲ್ಲಿ ಸ್ಮಶಾನಕ್ಕಾಗಿ ಮೀಸಲಾಗಿಟ್ಟಿರುವ 6.61 ಎಕರೆ ಜಾಗದ ಅತಿಕ್ರಮಣವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಶೀಘ್ರ ಗಡಿಗುರುತು ಮಾಡಬೇಕು. ಅದೇ ಜಾಗದಲ್ಲಿ 2 ಎಕರೆ ಪ್ರದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News