ಎ.21ರಂದು ಬಂಟ್ವಾಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ
ಬಂಟ್ವಾಳ, ಎ.13: ತಾಲೂಕಿನ ಸಜಿಪಮೂಡ ಗ್ರಾಮದ ಸುಭಾಷ್ ನಗರ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ವತಿಯಿಂದ 1 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬ್ರಹ್ಮಶ್ರೀ ನಾರಾಯಣ ಗುರು ‘ಜ್ಞಾನ ಮಂದಿರ’ವನ್ನು ಎ.21ರಂದು ಪೂರ್ವಾಹ್ನ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡುವರು ಎಂದು ಸಮಿತಿಯ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಹೇಳಿದರು. ತಾಲೂಕಿನ ಸಜಿಪಮೂಡ ಗ್ರಾಮದ ಸುಭಾಷ್ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕೇರಳ ಶಿವಗಿರಿ ಮಠದ ಸತ್ಯಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಆರೋಗ್ಯ ಸಚಿವ ಯು.ಟಿ.ಖಾದರ್, ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್, ಸಂಸದ ನಳಿನ್‌ಕುಮಾರ್ ಕಟೀಲು, ಶಾಸಕರಾದ ವಸಂತ ಬಂಗೇರ, ವಿ.ಸುನೀಲ್‌ಕುಮಾರ್ ಮತ್ತಿತರ ಗಣ್ಯರು ಭಾಗವಹಿಸುವರು.
ಕೆಂಪು ಕಲ್ಲಿನಿಂದಲೇ ನಿರ್ಮಾಣಗೊಂಡ ಈ ಜ್ಞಾನ ಮಂದಿರವು ದಕ್ಷಿಣ ಭಾರತದಲ್ಲಿ ಪ್ರಥಮವಾಗಿದ್ದು, ರಾಜಗೋಪುರ ಮತ್ತು ಗರ್ಭಗುಡಿ ಮೇಲಿನ ಗೋಪುರವು ತಂಜಾವೂರು ಶೈಲಿ ಹೊಂದಿದೆ. ಒಟ್ಟು 3 ಸಾವಿರ ಚದರ ಅಡಿ ವಿಸ್ತೀರ್ಣದ ಜ್ಞಾನ ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವಿನ ಪಂಚಲೋಹದ 3 ಅಡಿ ಎತ್ತರದ ಪದ್ಮಾಸನ ಭಂಗಿಯ ವಿಗ್ರಹ ಪ್ರತಿಷ್ಠಾಪನೆಗೊಳ್ಳಲಿದೆ. ಜ್ಞಾನ ಮಂದಿರ ಎದುರಿನ ಅಂಗಣಕ್ಕೆ ಕಲ್ಲು ಹಾಸು, ಇಂಟರ್‌ಲಾಕ್, ಒಳಚರಂಡಿ ಮತ್ತಿತರ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು ತಲಾ ಐದು ಲಕ್ಷ ರೂ. ಮೊತ್ತದ ಅನುದಾನ ಒದಗಿಸಿದ್ದಾರೆ ಎಂದು ಅವರು ತಿಳಿಸಿದರು. ಎ.20ರಂದು ಅಪರಾಹ್ನ 2 ಗಂಟೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ 3 ಅಡಿ ಎತ್ತರದ ಪಂಚಲೋಹದ ವಿಗ್ರಹ ಶೋಭಾಯಾತ್ರೆ ಮತ್ತು ಜಿಲ್ಲೆಯ ವಿವಿಧೆಡೆಯಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಬರಲಿದೆ. ಸಂಜೆ ನಡೆಯುವ ಧಾರ್ಮಿಕ ಸಭೆೆಯಲ್ಲಿ ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶಿವಮೊಗ್ಗ ರೇಣುಕಾನಂದ ಸ್ವಾಮೀಜಿ, ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕೃಷ್ಣ ಜೆ. ಪಾಲೆಮಾರ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು.
ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಬಿಲ್ಲವ ಮಹಾಮಂಡಲ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್, ಪ್ರಮುಖರಾದ ಯಶವಂತ ಡಿ., ಮಹಿಳಾ ಸಮಿತಿಯ ಶಾರದಾ, ಸಂತೋಷ್ ಕುಮಾರ್ ಕೊಟ್ಟಿಂಜ, ವಾಸು ಪೂಜಾರಿ, ಗಿರೀಶ್ ಕುಮಾರ್ ಪೆರ್ವ, ರಮೇಶ ಅನ್ನಪ್ಪಾಡಿ, ವಿಶ್ವನಾಥ ಬೆಳ್ಚಡ, ಬರ್ಕೆಗುತ್ತು ಮಹಾಬಲ ರೈ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.