ನನ್ನ ಗವಾಸ್ಕರ್‌ನನ್ನು ವಾಪಾಸು ಕೊಡಿ
ಶ್ರೀನಗರ: ಕಾಶ್ಮೀರ ಕಣಿವೆಯ ಹಂದ್ವಾರ ಪಟ್ಟಣದ ಮುಖ್ಯ ಚೌಕದಿಂದ 200 ಮೀಟರ್ ದೂರದ ಬಂಡಿ ಮೊಹಲ್ಲಾದ ಇಕ್ಕಟ್ಟಿನ ರಸ್ತೆ ಯುವ ಕ್ರಿಕೆಟಿಗ ನಯೀಮ್ ಖಾದರ್ ಬಟ್ ಮನೆಗೆ ಕರೆದೊಯ್ಯುತ್ತದೆ. ಮಂಗಳವಾರ ಸಂಜೆ ಈ ಯುವ ಕ್ರಿಕೆಟಿಗನಿಗೆ ಕಂಬನಿ ಮಿಡಿಯುವ ಸಲುವಾಗಿ ನೂರಾರು ಮಂದಿ ಶೋಕತಪ್ತರು ಸೇರಿದ್ದರು.
ಸೈನಿಕನೊಬ್ಬ ಕಾಶ್ಮೀರಿ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಾಗೂ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ, ಸೈನಿಕರು ಗುಂಡು ಹಾರಿಸಿದಾಗ ಈ ಉದಯೋನ್ಮುಖ ಆಟಗಾರ ಬಲಿಯಾಗಿದ್ದ.
"ಆತನ ತಂದೆ ಶವದೊಂದಿಗೆ ಪೊಲೀಸ್ ಠಾಣೆಯಲ್ಲಿದ್ದಾರೆ. ನನ್ನ ಗವಾಸ್ಕರ್‌ನನ್ನು ವಾಪಾಸು ಕರೆತರುವಂತೆ ಹೇಳುತ್ತೀರಾ" ಎಂದು ನನ್ನನ್ನೂ ಸೇರಿದಂತೆ ಮನೆಗೆ ಆಗಮಿಸಿದ ಜನರಲ್ಲಿ ಆತನ ತಾಯಿ ದೈನ್ಯದಿಂದ ಬೇಡುತ್ತಿದ್ದರು. ಆ ದೃಶ್ಯ ಹೃದಯ ವಿದ್ರಾವಕವಾಗಿತ್ತು.
ಮಂಗಳವಾರ ಸಂಜೆ ಶಾಲಾ ಸಮವಸ್ತ್ರದಲ್ಲಿದ್ದ ಯುವತಿ ಪೊಲೀಸರ ಸಮ್ಮುಖದಲ್ಲಿ, "ನನಗೆ ಯಾರೂ ಲೈಂಗಿಕ ಕಿರುಕುಳ ನಿಡಿಲ್ಲ. ಸ್ಥಳೀಯರೇ ಈ ಸಮಸ್ಯೆ ಹುಟ್ಟುಹಾಕಿದ್ದಾರೆ ಹಾಗೂ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ" ಎಂದು ಹೇಳಿಕೆ ನೀಡುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.
ಸೈನಿಕ ಈಕೆ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಸುದ್ದಿ ಹರಡುತ್ತಿದ್ದಂತೆ ನೂರಾಋಉ ಮಂದಿ ಪ್ರತಿಭಟನಾಕಾರರು ಬೀದಿಗಿಳಿದು ಸೇನೆ ಬಂಕರ್‌ಗಳ ಮೇಲೆ ದಾಳಿ ಮಾಡಿದರು. ಬಂಕರ್‌ಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು. ಇದಕ್ಕೆ ಪ್ರತಿಯಾಗಿ ಸೈನಿಕರು ಗುಂಡು ಹಾರಿಸಿದಾಗ ಸತ್ತ ಮೂವರ ಪೈಕಿ ನಯೀಮ್ ಒಬ್ಬ. ಆತ ಕಾಶ್ಮೀರ್ ಕ್ಲಾತ್ ಹೌಸ್ ಎದುರು ಈ ಘಟನಾವಳಿಗಳನ್ನು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದಾಗ ಆತನಿಗೆ ಗುಂಡಿಕ್ಕಲಾಯಿತು. ಸ್ಥಳದಲ್ಲೇ ಆತ ಮೃತಪಟ್ಟ ಎಂದು ಅಂಗಡಿಯ ಮಾಲೀಕ ಅಬ್ದುಲ್ ರಶೀದ್ ಸರಾಫ್ ವಿವರಿಸುತ್ತಾರೆ.
"ಸ್ಥಳೀಯ ಸರ್ಕಾರಿ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಸೇನಾ ಶಿಬಿರದ ಬಳಿ ಇದ್ದ ಸಾರ್ವಜನಿಕ ಶೌಚಾಲಯದತ್ತ ಹೋದರು. ಒಬ್ಬಳು ಅಲ್ಲೇ ನಿಂತಾಗ ಮತ್ತೊಬ್ಬಳು ಒಳಕ್ಕೆ ಹೋದಳು. ಹೊರಗೆ ನಿಂತಿದ್ದ ವಿದ್ಯಾರ್ಥಿನಿ ಮೇಲೆ ಸ್ಥಳೀಯ ಹುಡುಗರು ಹಲ್ಲೆ ಮಾಡಿದರು. ಶೌಚಾಲಯದ ಒಳಗೆ ಸೈನಿಕ ಇದ್ದಾನೆ ಎಂದು ಆಕೆಯನ್ನು ನಿಂಧಿಸಿದರು. ಇದೇ ವೇಳೆ ಶೌಚಾಲಯದ ಒಳಗಿದ್ದ ವಿದ್ಯಾರ್ಥಿನಿ ಕೂಡಾ ಹೊರ ನಡೆದಳು. ಆಗ ಸೈನಿಕರು ಹಾಗೂ ಯುವಕರ ನಡುವೆ ಘರ್ಷಣೆ ಆರಂಭವಾಯಿತು" ಎಂದು ಮತ್ತೊಬ್ಬ ಅಂಗಡಿ ಮಾಲೀಕ ಹೇಳುತ್ತಾರೆ.
ಪ್ರತಿಭಟನಾಕಾರರು ಸೇನಾ ಶಿಬಿರದ ಮೇಲೆ ದಾಳಿ ಮಾಡಿದರು. ಆಗ ಸೈನಿಕರು ಹಾರಿಸಿದ ಗುಂಡಿಗೆ ಮೊದಲು ಇಕ್ಬಾಲ್ ಫರೂಕ್ ಪೀರ್ (21) ಬಲಿಯಾದ. ಬಳಿಕ ನಯೀಮ್ ಮೃತಪಟ್ಟರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ನಯೀಮ್ ಮನೆಯೊಳಗೆ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ವಾಸಿಮ್ ಅಕ್ರಂ, ಬ್ರಿಯಾನ್ ಲಾರಾ ಮತ್ತಿತರ ಕ್ರಿಕೆಟ್ ದಿಗ್ಗಜರ ಚಿತ್ರಗಳಿವೆ. ಬಾಗಿಲ ಹಿಂದಕ್ಕೆ ಕಾಶ್ಮೀರಿ ಕ್ರಿಕೆಟಿಗ ಪರ್ವೇಜ್ ರಸೂಲ್ ಅವರನ್ನು ನಯೀಮ್ ಭೇಟಿಯಾದಾಗ ಸೆರೆಹಿಡಿದ ವ್ಯಕ್ತಿಗಾತ್ರದ ಚಿತ್ರವಿದೆ. "ಕ್ರಿಕೆಟ್ ಆತನ ಜೀವ. ಕ್ರಿಕೆಟ್ ತರಬೇತಿಗಾಗಿ 30 ಕಿಲೋಮೀಟರ್ ದೂರದ ಬಾರಾಮುಲ್ಲಾ ಕಾಲೇಜಿಗೆ ಹೋಗುತ್ತಿದ್ದ. ವಾರಕ್ಕೆ ಮೂರು ದಿನ ಸ್ಥಳೀಯ ಕ್ಲಬ್‌ನಲ್ಲಿ ಆಡುತ್ತಿದ್ದ" ಎಂದು ಸೋದರ ಸಂಬಂಧಿ ಫರೂಕ್ ಅಹ್ಮದ್ ವಿವರಿಸಿದರು.
"ನಯೀರ್ ಅಖಿಲ ಭಾರತ ಮಟ್ಟದ ತರಬೇತಿ ಶಿಬಿರಕ್ಕೂ ಮೂರು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದರು. ಹಂದ್ವಾರ ಪ್ರಥಮದರ್ಜೆ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಆತನ. ರಾಜ್ಯಮಟ್ಟದ 19ರ ವಯೋಮಿತಿ ಪಂದ್ಯಗಳಲ್ಲಿ ಅಮೋಘ ಸಾಧನೆ ಮಾಡಿದ ಬಳಿಕ ಆತ ಜನಪ್ರಿಯ ಕ್ರಿಕೆಟಿಗನಾಗಿದ್ದ. ಕುಪ್ವಾರಾದಿಂದ ಅಖಿಲ ಭಾರತ ಮಟ್ಟದ ಶಿಬಿರಕ್ಕೆ ಆಯ್ಕೆಯಾದ ಮೊಟ್ಟಮೊದಲ ಕ್ರಿಕೆಟಿಗ"
ಆತ ಪ್ರತಿಭಾವಂತ ಬ್ಯಾಟ್ಸ್‌ಮನ್. ಬಾರಾಮುಲ್ಲಾ ಮೈದಾನದಲ್ಲಿ ನಾವು ಜತೆಗೇ ಆಡುತ್ತಿದ್ದೆವು. ಹಂದ್ವಾರಾ ಸ್ಟಾರ್ ಇಲೆವೆನ್ ಪರ ಆಡುತ್ತಿದ್ದರು. ಭಾರತ ತಂಡಕ್ಕೆ ಆಡುವುದು ಆತನ ಕನಸಾಗಿತ್ತು" ಎಂದು ಬಾರಾಮುಲ್ಲಾದ ಅಮೀರ್ ನಬಿ ವಿವರಿಸಿದರು.
"ಸೈನಿಕರು ನೇರವಾಗಿ ಗುಂಡು ಹೊಡೆಯದಿದ್ದರೆ ನನ್ನ ಮಗ ಬದುಕಿಕೊಳ್ಳುತ್ತಿದ್ದ. ಪ್ರತಿಭಟನಾಕಾರರನ್ನು ಅಟ್ಟಾಡಿಸಿಕೊಂಡು ಹೋಗಿ ಗುಂಡು ಹೊಡೆದರು" ಎಂದು ಹಂದ್ವಾರ ಠಾಣೆಯಲ್ಲಿದ್ದ ನಯೀಮ್ ತಂದೆ ಜಿ.ಎಚ್.ಖಾದರ್ ಬಟ್ ಹೇಳಿದರು.
"ಇಕ್ಬಾಲ್ ಮುಖಕ್ಕೆ ಗುಂಡು ತಾಗಿತ್ತು. ಅಂತೆಯೇ ನಯೀಮ್‌ನ ಹೊಟ್ಟೆಯನ್ನು ಗುಂಡು ಸೀಳಿತ್ತು" ಎಂದು ಘಟನೆಯಲ್ಲಿ ಗಾಯಗೊಂಡ ಒಂಬತ್ತು ಮಂದಿಗೆ ಚಿಕಿತ್ಸೆ ನೀಡುತ್ತಿರುವ ಜಿಲ್ಲಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ರವೂಫ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರಾಜಾ ಬೇಗಂ ಎಂಬ ಮಹಿಳೆಯ ಮೆದುಳು ನಿಷ್ಕ್ರಿಯವಾಗಿದ್ದು, ಎದೆಗೆ ಗುಂಡು ತಗುಲಿದ ರಯೀಸ್ ಅಹ್ಮದ್ ಎಂಬ ಮತ್ತೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ಕೆ.ರಾಜೇಂದ್ರ ಹೇಳಿದ್ದಾರೆ. ಘಟನೆ ನಡೆಯುವ ವೇಳೆ ಕೇಂದ್ರ ಗೃಹಸಚಿವರ ಜತೆ ಸಭೆ ನಡೆಸುತ್ತಿದ್ದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.