ಪುತ್ತೂರು : ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಅಗ್ರಗಣ್ಯ ನಾಯಕರಲ್ಲಿ ಬಿ.ಆರ್. ಅಂಬೇಡ್ಕರ್ ಹೆಸರು ಚಿರಸ್ಥಾಯಿ-ಸೀತಾರಾಮ
ಪುತ್ತೂರು: ಭಾರತದ ಸಂವಿಧಾನದ ರಚನೆಯಲ್ಲಿ ಗಣನೀಯ ಕೊಡುಗೆ ನೀಡಿದ ಅಂಬೇಡ್ಕರ್‌ರವರು ಸಂವಿಧಾನ ಶಿಲ್ಪಿ. ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಅಗ್ರಗಣ್ಯ ನಾಯಕರಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ ಎಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಕೆ.ಸೀತಾರಾಮ ಕೇವಳ ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ತಾ.ಪಂ ಸಭಾಂಗಣದಲ್ಲಿನಡೆದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್‌ರವರ 125ನೇ ಜನ್ಮ ದಿನಾಚರಣಾ ಕಾರ‍್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಅಂಬೇಡ್ಕರ್ ತಮ್ಮ ಬದುಕಿನಲ್ಲಿ ಎಲ್ಲಾ ಬಗೆಯ ನೋವು ಮತ್ತು ಶೋಷಣೆಯನ್ನು ಅನುಭವಿಸಿದ್ದರು. ಸಮಾಜದಲ್ಲಿನ ಕಟ್ಟಕಡೆಯ ಜನರ ನೋವು ಮತ್ತು ಶೋಷಣೆಯನ್ನು ಹೋಗಲಾಡಿಸಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಸಾರಿದರಲ್ಲದೆ ಅದನ್ನು ಅವರು ಮಾಡಿ ತೋರಿಸಿದರು.
ಅಧ್ಯಕ್ಷತೆ ವಹಿಸಿದ ರಾಜ್ಯ ಸಂಸದೀಯ ಕಾರ‍್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿಯವರು ಮಾತನಾಡಿ ಭಾರತ ರತ್ನದ ಅಪೂರ್ವ ವ್ಯಕ್ತಿ ಡಾ| ಬಿ.ಆರ್ ಅಂಬೇಡ್ಕರ್‌ರವರು ಅನೇಕ ನೋವುಗಳ ನಡುವೆ ಭಾರತಕ್ಕೆ ಸಂವಿಧಾನ ಕಲ್ಪಿಸಿಕೊಟ್ಟ ಮಹಾನ್ ವ್ಯಕ್ತಿಯಾಗಿದ್ದಾರೆ. ಪುತ್ತೂರಿಗೆ ಅಂಬೇಡ್ಕರ್ ಭವನಕ್ಕಾಗಿ ರೂ..5 ಕೋಟಿ ಮಂಜೂರಾಗಿದೆ. ಕಂದಾಯ ಇಲಾಖೆಯಿಂದ ಸ್ಥಳ ತೋರಿಸಿದರೆ ಭವ್ಯ ಕಟ್ಟಡ ನಿರ್ಮಾಣವಾಗಲಿದೆ ಎಂದು ಹೇಳಿದರು. ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೆಟ್ಟ ಪಿ. ಈಶ್ವರ ಭಟ್‌ರವರು ಮಾತನಾಡಿ ಭಾರತಕ್ಕೆ ಪ್ರಥಮ ಸ್ಥಾನವನ್ನು ಸಂವಿಧಾನದಿಂದ ತಂದು ಕೊಟ್ಟವರು ಡಾ| ಬಿ.ಆರ್.ಅಂಬೇಡ್ಕರ್‌ರವರು. ಭಗವದ್ಗೀತೆಯಂತೆ ಪವಿತ್ರವಾಗಿರುವ ಭಾರತದ ಸಂವಿಧಾನಕ್ಕೆ ಜಗತ್ತಿನಲ್ಲೂ ವಿಶೇಷ ಗೌರವವಿದೆ. ಗೌರವಕ್ಕೆ ಮೂಲ ಕಾರಣಕರ್ತರಾದವರನ್ನು ನೆನಪಿಸುವುದು ನಮ್ಮ ಕರ್ತವ್ಯದಂತೆ ಅವರ ಜೀವನವನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಸಮಾರಂಭದ ಕೊನೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಡಬ ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿನಿ ನಿಲಯದ ಅಡುಗೆ ಕೆಲಸ ನಿರ್ವಹಿಸುವ ಮೋನಪ್ಪ ಗೌಡರಿಗೆ ಸನ್ಮಾನ ಕಾರ‍್ಯಕ್ರಮ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯ ಮನೇಜರ್ ಶರತ್, ಅನ್ನಪೂರ್ಣೇಶ್ವರಿ, ಸಿ.ಡಿ.ಪಿ.ಓ ಶಾಂತಿ ಹೆಗ್ಡೆ, ಕಂದಾಯ ಇಲಾಖೆಯ ನಾಗೇಶ್, ಹರೀಶ್ ಅತಿಥಿಗಳನ್ನು ಗೌರವಿಸಿದರು. ಉಪ ತಹಸೀಲ್ದಾರ್ ಶ್ರೀಧರ್ ಕೆ. ನಾಡಗೀತೆ ಹಾಡಿದರು. ಕೊಂಬೆಟ್ಟು ನಿಲಯ ಮೇಲ್ವಿಚಾರಕ ಕೃಷ್ಣ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್ ವಂದಿಸಿದರು. ಕಾರ್ಮಿಕ ಇಲಾಖೆಯ ಚಿದಾನಂದ ಕಾಮತ್ ಕಾರ‍್ಯಕ್ರಮ ನಿರೂಪಿಸಿದರು.